ಪಾರದರ್ಶಕತೆಯಿಂದ ಚುನಾವಣೆ ನಡೆಸಲು ಸಾಧ್ಯವಾಗದು: ಎಚ್.ವಿಶ್ವನಾಥ್

Update: 2018-03-12 16:18 GMT

ಮೈಸೂರು,ಮಾ.12: ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲವೆಂದು ರಾಜ್ಯ ಐಪಿಎಸ್ ಅಧಿಕಾರಿಗಳ ಸಂಘ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಬರೆದಿರುವ ಪತ್ರ ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾಗಿ ಇದೊಂದು ಗೂಂಡಾ ಸರ್ಕಾರ ಎಂದು ಸ್ಪಷ್ಟವಾಗಿದೆ ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ 2 ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ  ನಡೆಯಲಿದ್ದು, ಸಿಎಂ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಂತೆ ಮಾಡುತ್ತಿದ್ದಾರೆ. ಹಾಗಾಗಿ ಇಂತಹ  ಬೀಗುವಿನ ವಾತಾವರಣದಲ್ಲಿ, ಪಾರದರ್ಶಕತೆಯಿಂದ ಶಾಂತಿಯುತ ಚುನಾವಣೆ ನಡೆಸಲು ಸಾಧ್ಯವಾಗದು ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಮುಂದಿನ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇ ಬೇಕೆಂದು ಹವಣಿಸಿರುವ ಕಾಂಗ್ರೆಸ್, ಅಶೋಕ್ ಖೇಣಿ, ಆನಂದ್ ಸಿಂಗ್ ಸಂತೋಷ್ ಲಾಡ್ ಸೇರಿದಂತೆ ಮೊದಲಾದ ಕಳಂಕಿತರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಹಾಗಾಗಿ ಸದ್ಯ ರಾಜ್ಯದಲ್ಲಿಯೂ ಬಿಹಾರ, ಉತ್ತರ ಪ್ರದೇಶದಂತಹ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಈಗ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾಧನ ಸಮಾವೇಶವೆಂಬ ನೆಪದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕಿಳಿದಿದೆ. ಅಲ್ಲದೇ, ವೇದಿಕೆಯಲ್ಲಿ ಅಧಿಕಾರಿಗಳು ಇದ್ದರೂ ಸಹ ಪಕ್ಷದ ಪರ ಮತ ಕೇಳುತ್ತಿದ್ದಾರೆ. ಅನ್ಯಪಕ್ಷದ ಜನಪ್ರತಿನಿಧಿಗಳನ್ನು ತೀವ್ರವಾಗಿ ಕಡೆಗಣಿಸುತ್ತಿದ್ದು, ಹಣ, ಅಧಿಕಾರದ ದುರುಪಯೋಗವಾಗುತ್ತಿದೆ. ಆದ್ದರಿಂದ ಮುಂದಿನ ಚುನಾವಣೆ ಪಾರದರ್ಶಕತೆಯಿಂದ ನಡೆಯಲು ಸಾಧ್ಯವೇ ಎಂಬ ಅಂಶ ಅಭ್ಯರ್ಥಿಯಾದ ನನ್ನಲ್ಲಿಯೂ ಭಯವುಂಟು ಮಾಡಿದೆ ಎಂದು ತಿಳಿಸಿದರು.

ಸೋಲು ಖಚಿತ: ನಗರದಲ್ಲಿ ನೂತನವಾಗಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾಧಿಕಾರಿ ಕಚೇರಿ, ಜಯದೇವ ಆಸ್ಪತ್ರೆ ಸೇರಿದಂತೆ ಹಲವು ಕಟ್ಟಡಗಳ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷವೇ ಬೇಕಾಗಿದೆ. ಹೀಗಿದ್ದರೂ ಸಿಎಂ ಸಿದ್ದರಾಮಯ್ಯನವರು ತರಾತುರಿಯಲ್ಲಿ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸುತ್ತಿದ್ದು, ಅವರಲ್ಲಿ ಈಗಾಗಲೇ ಸೋಲಿನ ಭಯ ಕಾಡುತ್ತಿದೆ. ಉದ್ಘಾಟನಾ ಕಾರ್ಯಕ್ರಮಗಳಲ್ಲಿಯೂ ಯಾವುದೇ ಶಿಷ್ಟಾಚಾರ ಪಾಲಿಸದೆ ಅರಾಜಕತೆ ಸೃಷ್ಟಿಸಿದ್ದಾರೆ ಎಂದು ವಿಶ್ವನಾಥ ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಹಣ ಅಧಿಕಾರ ಸೇರಿದಂತೆ ಆಡಳಿತ ಯಂತ್ರ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಮುಂಬರುವ ಚುನಾವಣೆ ನ್ಯಾಯಯುತವಾಗಿ ಪಾರದರ್ಶಕತೆಯಿಂದ ನಡೆಸಲು ಸಾಧ್ಯವೇ ಇಲ್ಲವೆಂದು ಭವಿಷ್ಯ ನುಡಿದ ಅವರು, ಸರ್ಕಾರದ ಕಾರ್ಯವೈಖರಿಯನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿ ಸೂಕ್ತಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಅವರು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಹುಣಸೂರು ನಗರಸಭೆ ಅಧ್ಯಕ್ಷ ಶಿವಕುಮಾರ, ಸೋಮಸುಂದರ್, ರೇವಣ್ಣ, ಪಾರ್ಥಸಾರಥಿ, ಜಯಪ್ರಕಾಶ್ ಇದ್ದರು. 
 
                                     


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News