ಪುಸ್ತಕಗಳಿಂದ ತನ್ನದಲ್ಲದ ಅನುಭವಗಳನ್ನು ಮನುಷ್ಯ ರೂಢಿಸಿಕೊಳ್ಳುತ್ತಾನೆ: ಡಾ. ಭಾರತೀದೇವಿ

Update: 2018-03-12 16:58 GMT

ಹಾಸನ, ಮಾ.12: ಮನುಷ್ಯ ಪುಸ್ತಕಗಳಿಂದ ತನ್ನದಲ್ಲದ ಅನುಭವಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಡಾ. ಭಾರತೀದೇವಿ ಹೇಳಿದರು.

ಹೊಳೆನರಸೀಪುರ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ‘ಜಾಣ – ಜಾಣೆಯರ ಬಳಗ’ವು ಏರ್ಪಡಿಸಿದ್ದ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಮಾತನಾಡಿದ ಅವರು, ನಾವು ಓದುವ ಪುಸ್ತಕಗಳು ನಮ್ಮ ಭವಿಷ್ಯದ ದಾರಿಯನ್ನು ನಿರ್ಧರಿಸುತ್ತವೆ. ಗಾಂಧೀಜಿಯವರು ಜಾನ್ ರಸ್ಕಿನ್‍ನ ‘ಆನ್ ಟು ದ ಲಾಸ್ಟ್’ ಕೃತಿಯನ್ನು ಓದಿ ಪಡೆದ ಪ್ರೇರಣೆ, ಪರೋಕ್ಷವಾಗಿ ಭಾರತದ ಸ್ವಾತಂತ್ರ ಸಂಗ್ರಾಮದ ದಾರಿಯನ್ನು ನಿರ್ಧರಿಸಿತು. ಆದ್ದರಿಂದ ವಿದ್ಯಾರ್ಥಿಗಳು ಸರಿಯಾದ ಸಮಯದಲ್ಲಿ ಸರಿಯಾದ ಕೃತಿಗಳನ್ನು ಓದುವುದರಿಂದ ಬದುಕಿನಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಕನ್ನಡ ಸಾಹಿತ್ಯವು ಸಮೃದ್ಧವಾಗಿದ್ದು ಅತ್ಯುತ್ತಮ ಕೃತಿಗಳು ಲಭ್ಯವಿವೆ. ವಿದ್ಯಾರ್ಥಿ ದೆಸೆಯಲ್ಲಿಯೇ ಇಂತಹ ಪುಸ್ತಕಗಳನ್ನು ಓದುವ ಅಗತ್ಯವಿದೆ. ಅದು ಬಿಟ್ಟು ಇಂದಿನ ವಾಟ್ಸಾಪ್ ಮತ್ತು ಫೇಸ್‍ಬುಕ್‍ ಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ನೀವು ಸ್ವಂತಿಕೆಯಿಲ್ಲದವರಾಗುವ ಸಾಧ್ಯತೆಯಿದೆ. ಆದ್ದರಿಂದ ಇಂದಿನ ಯುವಜನತೆಗೆ ಸಾಮಾಜಿಕ ಮತ್ತು ರಾಜಕೀಯ ತಿಳುವಳಿಕೆಯ ಕೊರತೆಯಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಜಾಣ - ಜಾಣೆಯರ ಬಳಗದ ಸಂಚಾಲಕರಾದ ದಿನೇಶ್ ಕೆ.ಎಸ್, ವಿದ್ಯಾರ್ಥಿನಿಯರು ಜಾಣೆಯರಾಗಬೇಕೆಂಬ ಆಶಯದಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಜಾಣ-ಜಾಣೆಯರ ಬಳಗದ ವತಿಯಿಂದ ಏರ್ಪಡಿಸಲಾಗುತ್ತಿದೆ. ಪ್ರಸ್ತುತ ಪುಸ್ತಕ ಪ್ರಾಧಿಕಾರದ ಮುಖ್ಯ ಕಾರ್ಯಕ್ರಮವಾಗಿರುವ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರ ದೆಸೆಯಿಂದ ವಿದ್ಯಾರ್ಥಿನಿಯರು, ಪಠ್ಯೇತರವಾದ ಕೃತಿಗಳನ್ನೂ ಗಂಭೀರವಾಗಿ ಓದಲು ಸಾಧ್ಯವಾಗುತ್ತದೆ ಎಂದರು.

ಪ್ರಾಂಶುಪಾಲರಾದ ಡಾ. ಲಲಿತಾದೇವಿಯವರು ಮಾತನಾಡಿ, ನಾವು ವಿದ್ಯಾರ್ಥಿಗಳಾಗಿದ್ದಾಗ ಪುಸ್ತಕಗಳು ಮತ್ತು ರೇಡಿಯೊಗಳಷ್ಟೆ ಮನರಂಜನೆಗೆ ಲಭ್ಯವಾಗುತ್ತಿದ್ದವು. ಆದ್ದರಿಂದ ರಜಾದಿನಗಳಲ್ಲಿ ಹೆಚ್ಚೆಚ್ಚು ಪುಸ್ತಕಗಳನ್ನು ಓದುತ್ತಿದ್ದೆವು. ಆದರೆ ಈಗಿನ ಕಾಲದ ವಿದ್ಯಾರ್ಥಿಗಳಿಗೆ ಟಿ.ವಿ. ಮತ್ತು ಮೊಬೈಲ್ ಕಾರಣಗಳಿಂದಾಗಿ ಓದುವ ಹವ್ಯಾಸ ಕಡಿಮೆಯಾಗಿದೆ. ಆದರೆ ಉತ್ತಮ ಕೃತಿಗಳ ಅಭ್ಯಾಸದಿಂದಷ್ಟೆ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಸುಮಾರು 27 ಮಂದಿ ವಿದ್ಯಾರ್ಥಿನಿಯರು ತಮ್ಮ ಮೆಚ್ಚಿನ ಪುಸ್ತಕಗಳನ್ನು ಕುರಿತು ಮಾತನಾಡಿದರು. ಲಕ್ಷ್ಮಿ ಆರ್. ಎಸ್. ಪ್ರಥಮ ಸ್ಥಾನ ಪಡೆದರೆ, ಹಾಜಿರಾ ಬೇಗಂ ದ್ವಿತೀಯ ಸ್ಥಾನ ಮತ್ತು ಅಪೂರ್ವ ತೃತೀಯ ಸ್ಥಾನ ಪಡೆದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News