ರಾಜ್ಯದಲ್ಲಿ ಸಮಾನತೆಯ ಆಡಳಿತ ಜಾರಿಗೊಳಿಸಲಾಗಿದೆ: ಎಚ್.ಆಂಜನೇಯ

Update: 2018-03-12 18:09 GMT

ಮಂಡ್ಯ, ಮಾ.12: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಮಾಜದ ಸರ್ವ ಜನರಿಗೂ ಸಮಾನತೆಯ ಅವಕಾಶ ಕಲ್ಪಿಸುವ ಆಡಳಿತವನ್ನು ಸರಕಾರ ಜಾರಿಗೊಳಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ನಗರದ ಶಿವನಂಜಪ್ಪ ಉದ್ಯಾನವನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಪ್ರತಿಯೊಂದು ಸಮುದಾಯದ ಅಶಕ್ತರಿಗೆ ಹಾಗೂ ಬಡವರಿಗೆ ಸಮಾನತೆ ಒದಗಿಸುವುದೇ ಸರಕಾರದ ಬದ್ಧತೆಯಾಗಿದ್ದು, ಈ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದ ವಸತಿ ಹೀನರಿಗೆ ಶಾಶ್ವತ ಸೂರು ಒದಗಿಸಲು ಸರಕಾರ ತ್ವರಿತಗತಿಯ ನಿರ್ಧಾಗಳನ್ನು ಕೈಗೊಂಡಿದೆ. ಲಕ್ಷಾಂತರ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಹಲವಾರು ವಸತಿ ಶಾಲೆಗಳನ್ನು ತೆರೆಯುವ ಮೂಲಕ ಸುಮಾರು 1.5 ಲಕ್ಷ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವ್ಯವಸ್ಥೆ ಹಾಗು ವಿದ್ಯಾರ್ಥಿನಿಲಯದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ನುಡಿದರು.

ನಗರದಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಉಳಿದಿರುವ ಅಲ್ಪಸ್ವಲ್ಪ ಕಾಮಗಾರಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

ರಾಜ್ಯಮಟ್ಟ, ಜಿಲ್ಲಾಮಟ್ಟ, ತಾಲೂಕುಮಟ್ಟ ಹಾಗೂ ಹೋಬಳಿಮಟ್ಟದಲ್ಲಿ ಅಂಬೇಡ್ಕರ್ ಭವನ ನಿಮಾಣಕ್ಕೆ ಹಣ ಮಂಜೂರು ಮಾಡಲಾಗಿದೆ. ಅಂತರರಾಷ್ಟ್ರೀಯ ಸೆಮಿನಾರ್ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲಾಗಿದೆ. 120 ವಸತಿಶಾಲೆ ತೆರೆದಿದ್ದು, ಯಾವ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದು  ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಎಂ.ಕೃಷ್ಣಪ್ಪ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನನಗೆ ಎದುರಾದ ಮೈಷುಗರ್ ಸಮಸ್ಯೆ ಹಾಗೂ ಅಂಬೇಡ್ಕರ್ ಭವನವನ್ನು ಪೂರ್ಣಗೊಳಿಸುವ ಆಶ್ವಾಸನೆ ಈಡೇರಿಸಿದ್ದೇನೆ ಎಂದರು.

ದೇಶದ ಎಲ್ಲ ಮಹಾನಾಯಕರು ಒಂದಾಗಿ ಸಮನ್ವಯತೆಯಿಂದ ಬಾಳುವಂತೆ ಸಂದೇಶ ನೀಡಿದ್ದಾರೆ. ಅದರಂತೆ ನಾವೆಲ್ಲಾ ಒಂದಾಗಿ ಬಾಳಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಶಾಸಕ ಅಂಬರೀಶ್ ಮಾತನಾಡಿ, ಮಂಡ್ಯ ನಗರದಲ್ಲಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನವು ಹಲವು ವಿಚಾರಗಳಿಗೆ ಮಾದರಿಯಾಗಬೇಕು. ದೇಶದ ಸಂವಿಧಾನಕ್ಕೆ ನಾವು ಅರ್ಥ ತರುವ ನಿಟ್ಟಿನಲ್ಲಿ ಸಾಮಾಜಿಕ  ಕಾಳಜಿ, ಬದ್ದತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ವಿಧಾನಪರಿಷತ್ ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಡಿ.ಎಸ್.ವೀರಯ್ಯ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಮುಡಾ ಅಧ್ಯಕ್ಷ ಮುನಾವರ್ ಖಾನ್, ಜಿಲ್ಲಾಧಿಕಾರಿ ಮಂಜುಶ್ರೀ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಶರತ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News