ಮಹಿಳೆಗೆ ಸಮಾನ ಸ್ಥಾನಮಾನ ನೀಡಬೇಕು: ಸಚಿವ ಎಂ.ಕೃಷ್ಣಪ್ಪ

Update: 2018-03-12 18:11 GMT

ಮಂಡ್ಯ, ಮಾ.12: ದೇಶವು ಅಭಿವೃದ್ಧಿ ಹೊಂದಲು ಮಹಿಳೆಗೂ ಸಮಾನ ಸ್ಥಾನಮಾನ ನೀಡಬೇಕು ಎಂದು ವಸತಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗು ಜಿಲ್ಲಾ ಕಾವೇರಿ ಸ್ತ್ರೀಶಕ್ತಿ ಒಕ್ಕೂಟದ ವತಿಯಿಂದ ನಗರದ ಕಲಾಮಂದಿರದಲ್ಲಿ ಸೋಮವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಹೆಣ್ಣು ಕೂಡ ಅಬಲೆಯಲ್ಲ, ಸಬಲೆ. ಮಕ್ಕಳಿಗೆ ತಾಯಿಯಾಗಿ, ಗಂಡನಿಗೆ ಹೆಂಡತಿಯಾಗಿ ಸಂಸಾರದ ಭಾರವನ್ನು ಒತ್ತು ಸಂಸಾರವನ್ನು ಉನ್ನತಮಟ್ಟಕೆ ಒಯ್ಯತ್ತಾ ಇಡೀ ಕುಟುಂಬಕ್ಕೆ ಮಾದರಿಯಾಗಿದ್ದಾಳೆ ಎಂದು ಅವರು ತಿಳಿಸಿದರು.

ಸ್ತ್ರೀಶಕ್ತಿ ಸಂಘ ಒಕ್ಕೂಟದಿಂದ ಬಹಳಷ್ಟು ಹೆಣ್ಣು ಮಕ್ಕಳು ಸ್ವಾಭಿಮಾನ, ಹೋರಾಟದ ಹಾದಿಯನ್ನು ಒಳಗೊಂಡಿದ್ದಾರೆ. ಅಲ್ಲದೆ ಸ್ತ್ರೀಶಕ್ತಿ ಗುಂಪುಗಳಿಂದ ಮಹಿಳೆಯರಿಗೆ ರಾಜಕೀಯ, ಕ್ರೀಡೆ, ವ್ಯಾಪಾರ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರೋತ್ಸಾಹ ದೊರೆಯುತ್ತಿದೆ ಎಂದು ಅವರು ಶ್ಲಾಘಿಸಿದರು.
ಪುರಷರಷ್ಟೆ ಸಮಾನವಾಗಿ ಶೇ.50ರಷ್ಟು ಮೀಸಲಾತಿಯನ್ನು ರಾಜ್ಯ ಸರಕಾರ ಮಹಿಳೆಯರಿಗೆ ನೀಡಿದೆ ಎಂದ ಅವರು, ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಅರುಣಾಕುಮಾರಿ, ಸಾವಿತ್ರಮ್ಮ, ರತ್ನಮ್ಮ ಹಾಗೂ  ವಿವಿಧ ರಂಗದಲ್ಲಿ ಅತ್ಯುನ್ನತ ಸೇವೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ತಯಾರಿಸಿದ ವಸ್ತುಗಳ ಪ್ರದರ್ಶನವಿತ್ತು.

ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಿಪಂ ಸಿಇಓ ಬಿ.ಶರತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ.ಎಸ್.ದಿವಾಕರ್, ಕಾವೇರಿ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಜ್ಯೋತಿ ರವಿಕುಮಾರ್, ಉಪಾಧ್ಯಕ್ಷೆ ಲಕ್ಷೀ, ನಾಗಮಂಗಲ ತಾಲೂಕು ಒಕ್ಕೂಟದ ಅಧ್ಯಕ್ಷೆ ಯಶೋದಮ್ಮ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News