ಸಂಚಲನ ಮೂಡಿಸಿದ 'ಮಹಾ ರೈತ ಚಳವಳಿ'ಗೆ ಅಚ್ಚರಿಯ ಸ್ವಾಗತ ನೀಡಿದ್ದು ಯಾರು ಗೊತ್ತೆ?

Update: 2018-03-13 04:09 GMT

ಮುಂಬೈ, ಮಾ.13: ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೆಂಬಲಿತ ಅಖಿಲ ಭಾರತೀಯ ಕಿಸಾನ್ ಸಭಾ ಮಹಾರಾಷ್ಟ್ರದಲ್ಲಿ ನಡೆಸಿದ ರೈತಪರ ಹೋರಾಟ ರಾಷ್ಟ್ರದಲ್ಲಿ ಸಂಚಲನ ಮೂಡಿಸಿದೆ. ಎಡಪಕ್ಷಗಳ ಈ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ ಶಿವಸೇನೆ ಅಚ್ಚರಿ ಮೂಡಿಸಿದೆ.

ರೈತರ ರ್ಯಾಲಿ ಮುಂಬೈಗೆ ಆಗಮಿಸುತ್ತಿದ್ದಂತೆ ಶಿವಸೇನೆ ರ್ಯಾಲಿಗೆ ಬೆಂಬಲ ಘೋಷಿಸಿತು. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ಮಗ ಹಾಗೂ ಪಕ್ಷದ ಯುವ ಘಟಕದ ಅಧ್ಯಕ್ಷ ಆದಿತ್ಯ ಠಾಕ್ರೆ, ರೈತರ ಪಾದಯಾತ್ರೆ ಸ್ಥಳಕ್ಕೆ ತೆರಳಿ ಬೆಂಬಲ ಸೂಚಿಸಿದರು. ಥಾಣೆ ಹಾಗೂ ಮುಂಬೈನಲ್ಲಿ ಸೇನಾ ಕಾರ್ಯಕರ್ತರು ಹೋರಾಟಗಾರರಿಗೆ ಆಹಾರ ಮತ್ತು ನೀರು ವಿತರಿಸಿದರು. ಪಾದಯಾತ್ರೆಯಿಂದ ಬಳಲಿದ ರೈತರ ಆರೈಕೆ ಮಾಡುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆದಿತ್ಯ, ಇವರ ಬಗ್ಗೆ ಹೆಮ್ಮೆ ಇದೆ ಎಂದು ಬಣ್ಣಿಸಿದ್ದರು.

ಶಿವಸೇನೆ- ಎಡಪಕ್ಷಗಳ ಇತಿಹಾಸವನ್ನು ಗಮನಿಸಿದರೆ ಈ ಬೆಳವಣಿಗೆ ತೀರಾ ಅಚ್ಚರಿದಾಯಕ. ಶಿವಸೇನೆ ಆರಂಭದ ದಶಕದಿಂದಲೂ ಉಭಯ ಪಕ್ಷಗಳ ಕಾರ್ಯಕರ್ತರ ನಡುವಿನ ಸಂಘರ್ಷ ಸಾಮಾನ್ಯವಾಗಿತ್ತು. ಮಾಜಿ ಸಿಎಂ ವಸಂತರಾವ್ ನಾಯಕ್ ಅವರಂಥ ಕಾಂಗ್ರೆಸ್ ಮುಖಂಡರು ಎಡಪಕ್ಷ ಮತ್ತು ಎಡಪಂಥೀಯ ಕಾರ್ಮಿಕ ಸಂಘಟನೆಗಳಿಗೆ ಎದುರೇಟು ನೀಡುವ ಸಲುವಾಗಿಯೇ ಶಿವಸೇನೆಯನ್ನು ಪೋಷಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಎಡಪಕ್ಷಗಳನ್ನು ಮುಂಬೈನಲ್ಲಿ ಶಕ್ತಿಗುಂದಿಸುವ ಸಲುವಾಗಿ ಶಿವಸೇನೆಯನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎನ್ನಲಾಗಿತ್ತು. ಮರಾಠಿ ಸಾಹಿತಿ ಆಚಾರ್ಯ ಅತ್ರೆಯವರಂತೂ ಶಿವಸೇನೆಯನ್ನು 'ವಸಂತ ಸೇನೆ' ಎಂದೇ ಅಣಕವಾಡುತ್ತಿದ್ದರು.

ಅತಿಹೆಚ್ಚು ಶ್ರಮಿಕ ವರ್ಗದವರಿರುವ ಕೇಂದ್ರ ಮುಂಬೈನ ನಿಯಂತ್ರಣವನ್ನು ಎಡಪಕ್ಷಗಳ ಕೈಯಿಂದ ಸೇನೆ ಕಸಿಯುವ ಪ್ರಯತ್ನ ನಡೆದಾಗ ವ್ಯಾಪಕ ಹಿಂಸಾಚಾರವೂ ಸಂಭವಿಸಿತ್ತು. 1970ರ ಜೂನ್‌ನಲ್ಲಿ ಸಿಪಿಐ ಮುಖಂಡ ಹಾಗೂ ಶಾಸಕ ಕೃಷ್ಣ ದೇಸಾಯಿ ಹತ್ಯೆ ಪ್ರಕರಣದಲ್ಲೂ ಶಿವಸೇನೆಯ ಕೈವಾಡದ ಬಗ್ಗೆ ವ್ಯಾಪಕ ವದಂತಿ ಹಬ್ಬಿತ್ತು, ಬಳಿಕ ಶಿವಸೇನೆ ಪ್ರವರ್ಧಮಾನಕ್ಕೆ ಬಂದು ಎಡಪಕ್ಷಗಳ ಬಲ ಕ್ಷೀಣಿಸಿತ್ತು.

"ನಮ್ಮ ಮಧ್ಯೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸಂಯುಕ್ತ ಮಹಾರಾಷ್ಟ್ರ ಚಳವಳಿಗೆ ಎಡಪಕ್ಷಗಳ ಕೊಡುಗೆಯನು ಕಡೆಗಣಿಸುವಂತಿಲ್ಲ. ಭಿನ್ನಾಭಿಪ್ರಾಯ ಬದಿಗಿಟ್ಟು ರೈತ ಹೋರಾಟವನ್ನು ನಾವು ಬೆಂಬಲಿಸುತ್ತೇವೆ" ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಸೋಮವಾರ ಪ್ರಕಟಿಸಿತ್ತು.

ಆದಿತ್ಯ ಅವರಂತೂ, "ನನಗೆ ಕೆಂಪು ಬಾವುಟ ಕಾಣುತ್ತಿಲ್ಲ. ನಮ್ಮಂತೆಯೇ ಅವರ ಕೆಂಪು ನೆತ್ತರು ಕಾಣುತ್ತಿದೆ. ಅವರು ಯಾವುದೇ ಧ್ವಜ ಹಿಡಿದಿದ್ದರೂ, ಅವರ ರಾಜಕೀಯ ನೇತಾರ ಯಾರೇ ಆಗಿದ್ದರೂ, ಸರ್ಕಾರ ಕಿವಿಗೊಡಬೇಕು. ಇವರ ಮೇಲೆ ಸೈದ್ಧಾಂತಿಕ ಗೂಡು ಕಟ್ಟುವುದು ದುರದೃಷ್ಟಕರ" ಎಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News