ದಾವಣಗೆರೆ: ಲಿಂಗಾಯತ ಪ್ರತ್ಯೇಕ ಧರ್ಮದ ವರದಿ ನಿರ್ಧಾರ ವಿರೋಧಿಸಿ ಪ್ರತಿಭಟನೆ

Update: 2018-03-13 16:11 GMT

ದಾವಣಗೆರೆ,ಮಾ.13: ಲಿಂಗಾಯತ ಪ್ರತ್ಯೇಕ ಧರ್ಮದ ವರದಿ ಅಂಗೀಕಾರ ಮಾಡಲು ಮಾ. 14ರಂದು ಕ್ಯಾಬಿನೆಟ್‍ನಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರ ವಿರೋಧಿಸಿ ಮಾ.14ರಂದು ಬೆಳಗ್ಗೆ 10.30ಕ್ಕೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲು ವೀರಶೈವ ಮುಖಂಡರು ನಿರ್ಧರಿಸಿದ್ದಾರೆ.

ಈ ಕುರಿತು ಗೋಷ್ಠಿಯಲ್ಲಿ ಮಾತನಾಡಿದ ಆವರಗೊಳ್ಳ ಓಂಕಾರ ಶ್ರೀಗಳು, ವೀರಶೈವ ಲಿಂಗಾಯಿತರು ಒಂದೇ ಎಂದು ಸಾರಿ ಸಾರಿ ಹೇಳುತ್ತಿದ್ದರೂ ರಾಜ್ಯ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ವೀರಶೈವ ಲಿಂಗಾಯತರನ್ನು ಬೇರ್ಪಡಿಸಿದರೆ ಸುಲಭವಾಗಿ ಗೆಲ್ಲಬಹುದೆಂಬ ದುರಾಲೋಚನೆ ಸಿಎಂ ಸಿದ್ದರಾಮಯ್ಯ ಹೊಂದಿದ್ದಾರೆ. ಆದರೆ, ಈ ಮೂಲಕ ಅವರು ತಮ್ಮ ಕಾಂಗ್ರೆಸ್ ಅನ್ನು ಅಧೋಗತಿಯತ್ತ ತಳ್ಳಲು ಹೊರಟಿದ್ದಾರೆ ಎಂದ ಅವರು, ಕೆಲ ಅಲ್ಪಮತಿಗಳು ವೀರಶೈವ ಲಿಂಗಾಯತ ಧರ್ಮದ ಪೂರ್ವಪರ ಅರಿಯದೇ ಧರ್ಮದ ಬಗ್ಗೆ, ಧರ್ಮ ಗುರುಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ. ಇಂತವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಎಚ್ಚರಿಸಿದರು.

ಸಚಿವ ಎಂ.ಬಿ. ಪಾಟೀಲ್ ಧರ್ಮಗುರುಗಳಿಗೆ ಪಾಠ ಕಲಿಸುತ್ತೇನೆ ಎನ್ನುತ್ತಿದ್ದು, ಶಾಸಕನಾಗಲೂ ಅರ್ಹರಿಲ್ಲದ ನಿಮಗೆ ಇನ್ನೆರೆಡು ತಿಂಗಳಲ್ಲಿ ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ನೋಡುತ್ತೀರಿ ಎಂದ ಅವರು, ಬಸವರಾಜ ಹೊರಟ್ಟಿ, ಎಂ.ಬಿ ಪಾಟೀಲರು ರಾಜಕೀಯ ಪ್ರೇರಿತರಾಗಿ ಮನಬಂದಂತೆ ಮೆರೆದಾಡುತ್ತಿದ್ದಾರೆ. ಇವರಿಗೆ ತಕ್ಕ ಪಾಠ ನಿಶ್ಚಿತ ಎಂದರು.

ಕಂಬಾಳಿಮಠ ಗಂಗಾಧರ ಶ್ರೀ ಮಾತನಾಡಿ, ವೀರಶೈವ ಲಿಂಗಾಯತ ಎರಡೂ ಒಂದೆ ಆಗಿದ್ದು, ಯಾವುದೇ ಕಾರಣಕ್ಕೂ ಲಿಂಗಾಯತ ಧರ್ಮ ಪ್ರತ್ಯೇಕಕ್ಕೆ ನಿರ್ಧಾರ ಕೈಗೊಳ್ಳಕೂಡದು ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಪ್ರತಿಭಟನೆಯಲ್ಲಿ ಆಯಾ ಜಿಲ್ಲೆಯ ಶ್ರೀಗಳು, ರಾಜಕೀಯ ಮುಖಂಡರು ಹಾಗೂ ಸಮಾಜದ ಸಮಸ್ತ ಬಂದುಗಳು ಪಾಲ್ಗೊಳ್ಳುವರು ಎಂದರು.

ತರಾತುರಿಯಲ್ಲಿ ರಾಜಕೀಯಕ್ಕಾಗಿ ಸರ್ಕಾರ ಅಂಗೀಕಾರ ಮಾಡಲು ಯತ್ನಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸರ್ಕಾರ ಹೀಗೇ ಮೊಂಡುತನ ಮಾಡಿದರೆ ಜನರೇ ತಕ್ಕ ಶಾಸ್ತಿ ಮಾಡುತ್ತಾರೆ. ರಾಜಕೀಯವಾಗಿ ಬೇರೆಬೇರೆ ಮಾಡುವ ಮನಸುಗಳನ್ನು ಪರಿವರ್ತಿಸುವ ಕಾರ್ಯವಾಗಬೇಕು. ಇಲ್ಲಿ ಸರ್ಕಾರವೇ ನಿಂತು ಧರ್ಮ ಒಡೆಯುವ ಕಾರ್ಯಕ್ಕೆ ಮುಂದಾಗಿರುವುದು ವಿಷಾದನೀಯ ಎಂದರು.

ಪ್ರತಿಭಟನೆಯು ಶ್ರೀಶೈಲ ಮಠದಿಂದ ಆರಂಭಗೊಂಡು ರೇಣುಕಾಮಂದಿರ, ಎವಿಕೆ ರಸ್ತೆ, ಅಕ್ಕಮಹಾದೇವಿ ಕಲ್ಯಾಣ ಮಂಟಪ, ಕೆಬಿ ವೃತ್ತ, ಗಾಂಧಿ ಸರ್ಕಲ್ ಮೂಲಕ ಎಸಿ ಕಚೇರಿ ತಲುಪುವುದು ಎಂದು ಅವರು ವಿವರಿಸಿದರು.

ಗೋಷ್ಠಿಯಲ್ಲಿ ಬಳ್ಳಾರಿ ರೇವಣ್ಣ, ಹಾಲಸ್ವಾಮಿ, ಪ್ರಶಾಂತ್, ಮುರುಗೇಶ್, ಎನ್.ಎಂ. ತಿಪ್ಪಣ್ಣ, ವೀರಯ್ಯ, ಕರಿಬಸಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News