ತ್ರಿಪುರಾದಲ್ಲಿ ಗೋಮಾಂಸಕ್ಕೆ ನಿಷೇಧವಿಲ್ಲ: ಬಿಜೆಪಿ ಮುಖಂಡ ಸುನೀಲ್ ಸ್ಪಷ್ಟನೆ

Update: 2018-03-14 05:38 GMT

ಹೊಸದಿಲ್ಲಿ, ಮಾ.14: ತ್ರಿಪುರಾದಲ್ಲಿರುವ ಹೆಚ್ಚಿನ ಜನರು ಗೋ ಮಾಂಸ ಸೇವಿಸುತ್ತಿರುವ ಹಿನ್ನೆಲೆಯಲ್ಲಿ ಗೋ ಮಾಂಸ ಸೇವನೆಗೆ ನಿಷೇಧ ಹೇರುವುದಿಲ್ಲ. ನಮ್ಮ ಪಕ್ಷ ರಾಜ್ಯದ ಜನರ ಭಾವನೆಗೆ ಗೌರವ ನೀಡಲು ಬಯಸಿದೆ ಎಂದು ಬಿಜೆಪಿ ಮುಖಂಡ ಸುನೀಲ್ ದೇವಧರ್ ತನ್ನ ನಿಲುವು ಸ್ಪಷ್ಟಪಡಿಸಿದ್ದಾರೆ.

‘‘ಇಲ್ಲಿ(ತ್ರಿಪುರ)ಸಾಕಷ್ಟು ಮಂದಿ ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರಿದ್ದಾರೆ. ಕೆಲವು ಮಂದಿ ಹಿಂದೂಗಳು ಗೋ ಮಾಂಸ ಸೇವಿಸುತ್ತಾರೆ. ಗೋ ಸೇವನೆಗೆ ನಿಷೇಧ ಹೇರಬಾರದು ಎನ್ನುವುದು ನನ್ನ ಅನಿಸಿಕೆೆ’’ ಎಂದು ದೇವಧರ್ ಹೇಳಿದ್ದಾರೆ.

ಮಹಾರಾಷ್ಟ್ರದ ಸುನೀಲ್ ದೇವಧರ್ ಇತ್ತೀಚೆಗೆ ತ್ರಿಪುರಾದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದಾರೆ. ‘‘ಒಂದು ನಿರ್ದಿಷ್ಟ ರಾಜ್ಯದಲ್ಲಿ ಬೀಫ್ ಬ್ಯಾನ್ ಮಾಡುವ ಮೊದಲು ರಾಜ್ಯದ ಬಹುಸಂಖ್ಯಾತರ ಆದ್ಯತೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕೆಲವು ನಿರ್ಧಾರಗಳನ್ನು ಜನರ ಭಾವನೆಯ ದೃಷ್ಟಿಯಿಂದ ನೋಡಬೇಕಾಗುತ್ತದೆ’’ ಎಂದು ದೇವಧರ ಹೇಳಿದ್ದಾರೆ.

ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬೀಫ್ ಮೇಲೆ ನಿಷೇಧ ವಿಧಿಸುವುದಿಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಮೇಘಾಲಯದ ಜನತೆಗೆ ಕಳೆದ ವರ್ಷ ಭರವಸೆ ನೀಡಿದ್ದರು.

2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಾಗ ಗೋಮಾಂಸ ಸೇವನೆ ನಿಷೇಧ ಕೇಸರಿ ಪಕ್ಷದ ಪ್ರಮುಖ ಚುನಾವಣಾ ಕಾರ್ಯಸೂಚಿಯಾಗಿತ್ತು. ಗೋ ವಿಷಯಕ್ಕೆ ಸಂಬಂಧಿಸಿದ ಹಿಂಸಾಚಾರದಲ್ಲಿ ಅಲ್ಪಸಂಖ್ಯಾತ ಹಾಗೂ ಕೆಳ-ಜಾತಿಯ ಹಿಂದೂ ವರ್ಗದ ಜನರ ವಿರುದ್ಧ ದೌರ್ಜನ್ಯ, ಕಿರುಕುಳ ಹಾಗೂ ಬಲಾತ್ಕಾರದ ಸುಲಿಗೆ ಮಾಡಲಾಗಿತ್ತು.

 ರಾಯಿಟರ್ಸ್ ವರದಿಯ ಪ್ರಕಾರ 2010 ಹಾಗೂ 2017ರ ನಡುವೆ ದೇಶದಲ್ಲಿ ನಡೆದ ಗೋ-ಸಂಬಂಧಿತ ಹಿಂಸಾಚಾರದಲ್ಲಿ 28 ಮಂದಿ ಮೃತಪಟ್ಟಿದ್ದರೆ, 124 ಜನರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News