ಭೀಮಾ ಕೋರೆಗಾಂವ್ ಹಿಂಸಾಚಾರ: ಪ್ರಮುಖ ಆರೋಪಿ ಮಿಲಿಂದ್ ಏಕ್ಬೋಟೆ ಬಂಧನ

Update: 2018-03-14 08:26 GMT

ಹೊಸದಿಲ್ಲಿ, ಮಾ.14: ಜನವರಿ 1ರಂದು ಮಹಾರಾಷ್ಟ್ರದ ಭೀಮಾ ಕೊರೆಗಾಂವ್ ನಲ್ಲಿ ನಡೆದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಮಿಲಿಂದ್ ಏಕ್ಬೋಟೆಗೆ ಇಂದು ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಬೆನ್ನಲ್ಲೇ ಪುಣೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಕಳೆದ ತಿಂಗಳು ಸುಪ್ರೀಂ ಕೋರ್ಟ್ ಅವರಿಗೆ ಮಾರ್ಚ್ 14ರವರೆಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಅದಕ್ಕೂ ಮುಂಚೆ ಅವರಿಗೆ ಪುಣೆಯ ವಿಶೇಷ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಈ ಹಿಂಸಾಚಾರ ಸಂಬಂಧ ಏಕ್ಬೋಟೆ ವಿರುದ್ಧ ಎರಡು ಎಫ್‍ಐಆರ್ ದಾಖಲಾಗಿದ್ದವು. ಭೀಮಾ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಗೆ ದಲಿತರು ದೊಡ್ಡ ಸಂಖ್ಯೆಯಲ್ಲಿ ಪುಣೆಯ ಗ್ರಾಮದಲ್ಲಿ ಸೇರಿದ್ದಾಗ ಘಟನೆ ನಡೆದಿತ್ತು.

ಈ ಹಿಂಸಾಚಾರ ಸಂಬಂಧ ಗಂಭೀರ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಘೋಷಿಸಿದ್ದರು. ಎಡಿಜಿಪಿ (ಕಾನೂನು ಸುವ್ಯವಸ್ಥೆ) ಇವರ ನೇತೃತ್ವದಲ್ಲಿ ಸಮಿತಿಯೊಂದು ಈ ನಿಟ್ಟಿನಲ್ಲಿ ಸರಕಾರಕ್ಕೆ ಸೂಕ್ತ ಶಿಫಾರಸು ಮಾಡುವುದು ಎಂದು ಅವರು ಮಾಹಿತಿ ನೀಡಿದ್ದರು. ಹಿಂಸಾಚಾರ ವೇಳೆ  ಆಸ್ತಿಪಾಸ್ತಿಗಳಿಗೆ ಉಂಟಾದ 13 ಕೋಟಿ ರೂ. ನಷ್ಟವನ್ನು ಸರಕಾರ ಭರಿಸುವುದಾಗಿಯೂ ಅವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News