ಚಿಕ್ಕಮಗಳೂರು: ಪ್ರತಿಮೆಗಳ ಧ್ವಂಸ ಖಂಡಿಸಿ ದಸಂಸ ಪ್ರತಿಭಟನೆ

Update: 2018-03-14 15:16 GMT

ಚಿಕ್ಕಮಗಳೂರು, ಮಾ.14: ದೇಶಾದ್ಯಂತ ಅಂಬೇಡ್ಕರ್, ಪೆರಿಯಾರ್, ಲೆನಿನ್ ಮೊದಲಾದ ಮಾನವತಾವಾದಿಗಳ ಪ್ರತಿಮೆಗಳನ್ನು ಕೆಡವಿ ಧ್ವಂಸ ಮಾಡಿದ ಸಂಘಪರಿವಾರದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ದಸಂಸ ಕಾರ್ಯಕರ್ತರು ಬುಧವಾರ ನಗರದಲ್ಲಿ ಧರಣಿ ನಡೆಸಿದರು.

ದಸಂಸ ಮುಖಂಡ ಕೆ.ವಿ.ರಾಜರತ್ನಂ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ನೂರಾರು ದಸಂಸ ಕಾರ್ಯಕರ್ತರು ಮಾನವತಾವಾದಿಗಳ ಪ್ರತಿಮೆಗಳನ್ನು ಕೆಡವಿದ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಈ ಕೃತ್ಯದ ಹಿಂದೆ ಸಂಘಪರಿವಾರ ಹಾಗೂ ಕೇಂದ್ರ ಸರಕಾರದ ಕೈವಾಡವಿದೆ ಎಂದು ಆರೋಪಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. 

ಧರಣಿ ನಿರತರನ್ನುದ್ದೇಶಿಸಿ ಈ ವೇಳೆ ಮಾತನಾಡಿದ ಮುಖಂಡ ಕೆ.ವಿ.ರಾಜರತ್ನಂ, ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷಗಳು ಕಳೆದಿವೆ. ಸ್ವಾತಂತ್ರ್ಯ, ಸಮಾನತೆ, ಸಮಸಮಾಜಕ್ಕಾಗಿ ದೇಶದಲ್ಲಿ ಅಂಬೇಡ್ಕರ್, ಪೆರಿಯಾರ್ ಅಂತಹ ಮಹಾನ್ ಮಾನವತಾವಾದಿಗಳು ಹೋರಾಡಿದ್ದಾರೆ. ಇಂತವರನ್ನೇ ದೇವರೆಂದು ಪೂಜಿಸುವವರ ಸಂಖ್ಯೆ ದೇಶಾದ್ಯಂತ ಕೋಟ್ಯಂತರ ಅನುಯಾಯಿಗಳಿದ್ದಾರೆ. ಪ್ರತಿಮೆಗಳ ಮೂಲಕವೇ ಮಾನವತಾವಾದಿಗಳನ್ನು ಕಾಣುತ್ತಿದ್ದಾರೆ. ಈ ಪ್ರತಿಮೆಗಳು ಅನುಯಾಯಿಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಆದರೆ ಸಂಘಪರಿವಾರದ ಕಿಡಿಗೇಡಿಗಳು ಇಂತಹ ಮಾನವತಾವಾದಿಗಳ ಪ್ರತಿಮೆಗಳನ್ನು ಕೆಡವಿ ಅನುಯಾಯಿಗಳು, ಅಭಿಮಾನಿಗಳ ಭಾವನಾತ್ಮಕ ಸಂಬಂಧಕ್ಕೆ ನೋವುಂಟು ಮಾಡಿದ್ದಾರೆಂದು ಆಶರೋಪಿಸಿದರು.

ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ದಲಿತರು, ಅಲ್ಪಸಂಖ್ಯಾತರು ಭಯದಿಂದ ಜೀವನ ನಡೆಸುವಂತಾಗಿದೆ. ಶೋಷಿತರ ಮೇಲೆ ನಿರಂತರ ಹಲ್ಲೆ, ದೌರ್ಜನ್ಯ ಹೆಚ್ಚುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದ ಸರಕಾರಗಳು ಕಂಡೂ ಕಾಣದಂತೆ ನಟನೆ ಮಾಡುತ್ತಿದ್ದು, ರಾಜಕೀಯ ಅಧಿಕಾರಕ್ಕೆ ಇಂತಹ ಅಮಾನವೀಯ ಘಟನಗೆಳನ್ನು ಬಳಸಿಕೊಳ್ಳುವಂತಹ ಹೀನ ಮನಸ್ಥಿತಿಗೆ ರಾಜಕೀಯ ಬಿಜೆಪಿ ಮುಖಂಡರು ತಲುಪಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾನ್ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಬುದ್ಧಿಜೀವಿಗಳು, ಚಿಂತಕರು, ದೇಶಾಭಿಮಾನಿಗಳೂ ಆದವರ ತ್ಯಾಗ, ಬಲಿದಾನ ಮಾಡಿದ ಮಹಾನ್ ನಾಯಕರ ಪ್ರತಿಮೆಗಳನ್ನು ನಾಶ ಮಾಡುವುದರಿಂದ ಅವರ ಸೈದ್ಧಾಂತಿಕ ನಿಲುವು, ಚಿಂತನೆಗಳನ್ನು ನಾಶ ಮಾಡಲು ಸಾಧ್ಯವಿಲ್ಲ ಎಂಬುದನ್ನು ಕೆಲ ರಾಜಕೀಯ ಪಕ್ಷಗಳಲ್ಲಿರುವ ಕಿಡಿಗೇಡಿಗಳು ಅರಿಯಬೇಕು. ಮಹಾನ್ ವ್ಯಕ್ತಿಗಳಾದ ಪೆರಿಯಾರ್, ಸ್ಟಾಲಿನ್, ಲೋಹಿಯಾ, ಅಂಬೇಡ್ಕರ್ ಪ್ರತಿಮೆಗಳನ್ನು ಬಿಜೆಪಿ ಕಾರ್ಯಕರ್ತರು ನಾಶ ಮಾಡಿರುವುದು ಜಗಜ್ಜಾಹೀರಾಗಿದೆ. ಸರಕಾರಗಳು ಕೂಡಲೇ ಇಂತಹ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಸಬೇಕೆಂದರು ಒತ್ತಾಯಿಸಿದರು. 

ಜಿಲ್ಲಾ ಸಂಚಾಲಕರ ಅಪ್ಪಣ್ಣ ಮಾತನಾಡಿ, ರಾಜ್ಯದಲ್ಲೂ ಮಾನವತಾವಾದಿಗಳ ಪ್ರತಿಮೆಗಳನ್ನು ಕೆಡವಲು ಕೆಲ ಸಂಘಟನೆಗಳ ಕಿಡಿಗೇಡಿಗಳು ಸಂಚು ರೂಪಿಸಿದ್ದು, ರಾಜ್ಯದಲ್ಲಿರುವ ಗಾಂಧಿ, ಅಂಬೇಡ್ಕರ್, ಬಸವಣ್ಣ, ಬುದ್ಧನ, ಲೋಹಿಯಾ ಮತ್ತಿತರ ವಿಶ್ವನಾಯಕರ ಪ್ರತಿಮೆಗಳಿಗೆ ರಕ್ಷಣೆ ನೀಡಲು ರಾಜ್ಯ ಸರಕಾರ ರಕ್ಷಣೆ ನೀಡಬೇಕು. ದೇಶದ ವಿವಿಧೆಡೆ ಪ್ರತಿಮೆಗಳನ್ನು ಕೆಡವಿದವರನ್ನು ಗುರುತಿಸಿ ಆಯಾ ರಾಜ್ಯಗಳು ಗಡಿಪಾರು ಶಿಕ್ಷೆ ನೀಡಬೇಕೆಂದರು. ಕೆಡವಿದ ಪ್ರತಿಮೆಗಳ ಪುನರ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದರು. ಧರಣಿ ನಂತರ ಈ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News