ವಿರೋಧ ಪಕ್ಷಗಳ ಪ್ರತಿಭಟನೆ ಮಧ್ಯೆ ಲೋಕಸಭೆಯಲ್ಲಿ ಬಜೆಟ್ ಅನುಮೋದನೆ

Update: 2018-03-14 15:23 GMT

ಹೊಸದಿಲ್ಲಿ, ಮಾ.14: ವಿಪಕ್ಷಗಳ ಗದ್ದಲದಿಂದ ಲೋಕಸಭೆಯಲ್ಲಿ ಅಧಿವೇಶನದ ಎಂಟನೇ ದಿನವೂ ಯಾವುದೇ ಪ್ರಮುಖ ಚರ್ಚೆಗಳು ನಡೆಯದೇಯೇ ದಿನದ ಅಂತ್ಯ ಕಂಡರೂ ಸರಕಾರವು ಕಡ್ಡಾಯ ನಿಗದಿತ ಸಮಯ ಪ್ರಕ್ರಿಯೆಯ ಮೂಲಕ ಎಪ್ರಿಲ್ ಒಂದರಿಂದ ಆರಂಭವಾಗುವ ವಿತ್ತೀಯ ವರ್ಷಕ್ಕೆ ಬಜೆಟನ್ನು ಪಡೆದುಕೊಂಡಿತು.

ವಿತ್ತ ಸಚಿವ ಅರುಣ್ ಜೇಟ್ಲಿ ತಮ್ಮ ಐದನೇ ಮತ್ತು ಅಂತಿಮ ಬಜೆಟ್‌ನ ತೆರಿಗೆ ಪ್ರಸ್ತಾವನೆಗಳನ್ನು ಒಳಗೊಂಡಿರುವ ವಿತ್ತ ಮಸೂದೆ 2018 ಮತ್ತು ವಿವಿಧ ಇಲಾಖೆಗಳ ಖರ್ಚುವೆಚ್ಚದ ವಿವರಣೆ ನೀಡುವ ವಿನಿಯೋಗ ಕಾಯ್ದೆಯನ್ನು ಮಂಡಿಸಿದರು. ಈ ಮಸೂದೆಗಳನ್ನು ಧ್ವನಿಮತದ ಮೂಲಕ ಅನುಮೋದಿಸಲಾಯಿತು.

ಆಡಳಿತಾರೂಡ ಬಿಜೆಪಿ ನೇತೃತ್ವದ ಎನ್‌ಡಿಎಯು ಸಂಸತ್‌ನ ಕೆಳಮನೆಯಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿದೆ. ನಿಗದಿತ ಸಮಯ ಪ್ರಕ್ರಿಯೆಯ ಮೂಲಕ ವಿನಿಯೋಗ ಕಾಯ್ದೆಗೆ ಅನುಮೋದನೆ ಪಡೆಯಲಾಯಿತು. ಈ ಪ್ರಕ್ರಿಯೆ ಜಾರಿಯಾದರೆ ವಿವಿಧ ಇಲಾಖೆಗಳಿಗೆ ನೀಡಲಾಗುವ ಅನುದಾನಗಳ ಬಾಕಿಯಿರುವ ಬೇಡಿಕೆಯನ್ನು ಯಾವುದೇ ಚರ್ಚೆ ನಡೆಯದಿದ್ದರೂ ಮತಕ್ಕೆ ಹಾಕಲಾಗುತ್ತದೆ. ತಾಂತ್ರಿಕವಾಗಿ ಈ ಎರಡೂ ಮಸೂದೆಗಳು ರಾಜ್ಯಸಭೆಯಲ್ಲೂ ಅಂಗೀಕಾರ ಪಡೆಯಬೇಕಾಗಿದೆ. ಆದರೆ ಇವೆರಡೂ ಹಣಕ್ಕೆ ಸಂಬಂಧಿಸಿದ ಮಸೂದೆಗಳಾದ ಕಾರಣ ಸಂಸತ್‌ನ ಮೇಲ್ಮನೆಯು ಹದಿನಾಲ್ಕು ದಿನಗಳ ಒಳಗೆ ಇವುಗಳನ್ನು ವಾಪಸ್ ಕಳುಹಿಸದಿದ್ದರೆ ಅದಕ್ಕೆ ಅನುಮೋದನೆ ದೊರಕಿದೆ ಎಂದೇ ಪರಿಗಣಿಸಲಾಗುತ್ತದೆ. ಬಜೆಟ್ ಅನುಮೋದನೆಯು ಒಂದು ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು ಇದರ ಹೊರತು ಸರಕಾರವು ಒಂದು ಪೈಸೆಯನ್ನೂ ತನ್ನ ಕೆಲಸಗಳಿಗೆ ವೆಚ್ಚ ಮಾಡುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News