ಮಕ್ಕಳ ಅಶ್ಲೀಲ ಚಿತ್ರ ತಡೆಗೆ ಈ ತಂತ್ರಜ್ಞಾನ ಬಳಸಲಿದೆ ಕೇಂದ್ರ

Update: 2018-03-14 15:54 GMT

ಹೊಸದಿಲ್ಲಿ, ಮಾ.14: ಅಂತರ್ಜಾಲದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ಅತ್ಯಾಚಾರದ ವಿಡಿಯೊಗಳ ಮೇಲೆ ನಿಯಂತ್ರಣ ಹೇರಲು ಗೃಹ ಸಚಿವಾಲಯವು ಫೊಟೊ ಡಿಎನ್‌ಎ ತಂತ್ರಜ್ಞಾನವನ್ನು ಬಳಸಲು ಚಿಂತನೆ ನಡೆಸಿದೆ. ಅದಕ್ಕಾಗಿ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಅಮೆರಿಕದ ರಾಷ್ಟ್ರೀಯ ನಾಪತ್ತೆಯಾದ ಮತ್ತು ಶೋಷಣೆಗೊಳಪಟ್ಟ ಮಕ್ಕಳ ಕೇಂದ್ರ (ಎನ್ಸಿಎಮ್‌ಇಸಿ)ದ ಮಧ್ಯೆ ಸಂಪರ್ಕವನ್ನು ಸಾಧಿಸಲು ವಾಸ್ತವಿಕ ಖಾಸಗಿ ಜಾಲವ್ಯವಸ್ಥೆಯನ್ನು ಸಿದ್ಧಪಡಿಸಲು ಅಮೆರಿಕದ ಸಹಾಯವನ್ನು ಕೋರಿದೆ. ಗೃಹ ಸಚಿವಾಲಯವು ರೂಪಿಸಿರುವ ಕ್ರಮಗಳ ಮಾಹಿತಿಯನ್ನು ಹೆಚ್ಚುವರಿ ಪ್ರಧಾನ ಸಲಹಾ ವಕೀಲ ಮಣಿಂದರ್ ಸಿಂಗ್ ಒಪ್ಪಿಸಿದ್ದಾರೆ.

ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ಅತ್ಯಾಚಾರದ ವಿಡಿಯೊಗಳನ್ನು ಅಂತರ್ಜಾಲದಲ್ಲಿ ಹಾಕದಂತೆ ತಡೆಯುವ ಕ್ರಮಗಳಲ್ಲಿ ದೇಶದ ಎಲ್ಲ ಪೊಲೀಸ್ ಠಾಣೆಗಳನ್ನು ಜೋಡಿಸುವಂಥ ಜಾಲತಾಣವನ್ನು ರೂಪಿಸುವುದು ಮತ್ತು ಅನಾಮಧೇಯ ದೂರುಗಳನ್ನು ದಾಖಲಿಸುವುದು ಸೇರಿದೆ. ಮೂರು ವರ್ಷಗಳ ಹಿಂದೆ ಪ್ರಜ್ವಲ್ ಎಂಬ ಸರಕಾರೇತರ ಸಂಸ್ಥೆ ಬರೆದ ಪತ್ರವನ್ನು ಆಧರಿಸಿ ಸರ್ವೋಚ್ಚ ನ್ಯಾಯಾಲಯವು ಸ್ವ-ಇಚ್ಛೆಯಿಂದ ತೆಗೆದುಕೊಂಡಿರುವ ಕ್ರಮದ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶ ಮದನ್ ಬಿ. ಲೊಕೂರ್ ಹಾಗೂ ದೀಪಕ್ ಗುಪ್ತ ನೇತೃತ್ವದ ಪೀಠಕ್ಕೆ ಸಿಂಗ್ ಈ ಮಾಹಿತಿ ನೀಡಿದ್ದಾರೆ. ಜೊತೆಗೆ ಸದ್ಯ ಅಭಿವೃದ್ಧಿಪಡಿಸಲಾಗಿರುವ ಜಾಲತಾಣವನ್ನು ಎರಡು ರಾಜ್ಯಗಳಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಫೊಟೊ ಎನ್‌ಡಿಎ ತಂತ್ರಜ್ಞಾನವು ಚಿತ್ರ, ವಿಡಿಯೊ ಮತ್ತು ಧ್ವನಿಸಂಗ್ರಹದ ಹ್ಯಾಶ್ ಮೌಲ್ಯವನ್ನು ಲೆಕ್ಕಹಾಕುತ್ತದೆ ಮತ್ತು ಆಮೂಲಕ ಅದೇ ರೀತಿಯ ಚಿತ್ರಕ್ಕಾಗಿ ಶೋಧ ನಡೆಸುತ್ತದೆ. ಈ ತಂತ್ರಜ್ಞಾನವನ್ನು ಪ್ರಮುಖವಾಗಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News