ಚುನಾವಣೆಯ ಸೋಲಿನ ಜೊತೆ ಗೋರಖ್‌ಪುರದಲ್ಲಿ ಆದಿತ್ಯನಾಥ್ ಗೆ ಮತ್ತೊಂದು ಹೊಡೆತ

Update: 2018-03-14 16:04 GMT

ಗೋರಖ್‌ಪುರ, ಮಾ.14: ಬುಧವಾರ ಬಿಜೆಪಿ, ಮುಖ್ಯವಾಗಿ ಆದಿತ್ಯನಾಥ್ ಪಾಲಿಗೆ ಅತ್ಯಂತ ಕೆಟ್ಟ ದಿನವಾಗಿ ಪರಿಣಮಿಸಿದೆ. ಉತ್ತರ ಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಎರಡೂ ಸ್ಥಾನಗಳಲ್ಲಿ ದೊಡ್ಡ ಅಂತರದ ಸೋಲು ಅನುಭವಿಸುವ ಮೂಲಕ ತೀವ್ರ ಮುಜುಗರಕ್ಕೊಳಗಾಗಿದೆ. ಪ್ರಮುಖವಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿನಿಧಿಸುತ್ತಿದ್ದ ಗೋರಖ್‌ಪುರ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ವೌರ್ಯ ಜಯಗಳಿಸಿದ್ದ ಫುಲ್ಪುರ್ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ತನ್ನ ಸಾಂಪ್ರದಾಯಿಕ ಎದುರಾಳಿ ಬಹುಜನ ಸಮಾಜ ಪಕ್ಷದ ಬೆಂಬಲದೊಂದಿಗೆ ಬಿಜೆಪಿಯ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ ಬೆಸ್ತರ ಸಂಘಟನೆ ನಿಶದ್ ಗೋರಖ್‌ನಾಥ್ ದೇವಸ್ಥಾನದ ಮೇಲೆ ಹಕ್ಕು ಸಾಧಿಸಿದ್ದು ಅದನ್ನು ತಮ್ಮ ಸುಪರ್ದಿಗೆ ನೀಡುವಂತೆ ಆಗ್ರಹಿಸಿದೆ. ಆಮೂಲಕ ಈ ದೇವಸ್ಥಾನದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಆದಿತ್ಯನಾಥ್ ಸ್ಥಾನಕ್ಕೆ ಕುತ್ತು ತಂದಿದೆ.

ಗೋರಖ್‌ನಾಥ್ ದೇವಸ್ಥಾನವು ಬೆಸ್ತ ಸಮುದಾಯಕ್ಕೆ ಸೇರಿದ್ದಾಗಿದೆ. ಆದರೆ ಈ ದೇವಸ್ಥಾನವನ್ನು 19ನೇ ಶತಮಾನದಲ್ಲಿ ಮೇಲ್ಜಾತಿಯವರು ಒತ್ತಾಯಪೂರ್ವಕವಾಗಿ ವಶಪಡಿಸಿಕೊಂಡಿದ್ದರು. ಹಾಗಾಗಿ ಈ ದೇವಸ್ಥಾನದ ಮುಖ್ಯಸ್ಥನ ಸ್ಥಾನದಲ್ಲಿ ಓರ್ವ ಬೆಸ್ತನನ್ನು ನೇಮಿಸಬೇಕು ಎಂದು ನಿರ್ಬಲ ಇಂಡಿಯನ್ ಶೋಷಿತ್ ಹಮಾರಾ ಆಮ್ ದಲ್ (ನಿಶದ್) ನ ಅಧ್ಯಕ್ಷ ಸಂಜಯ್ ನಿಶದ್ ತಿಳಿಸಿದ್ದಾರೆ. ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂಜಯ್ ಅವರ ನಿಶದ್ ಪಕ್ಷವು ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿತ್ತು ಮತ್ತು ಒಂದು ಸ್ಥಾನವನ್ನು ಗೆದ್ದುಕೊಂಡಿತ್ತು. ಇದೀಗ ಸಂಜಯ್ ಅವರ ಪುತ್ರ ಪ್ರವೀಣ್ ಕುಮಾರ್ ನಿಶದ್ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗೋರಖ್‌ಪುರದಲ್ಲಿ ಜಯ ಸಾಧಿಸಿರುವುದು ನಿಶದ್ ಪಕ್ಷವು ಎಸ್‌ಪಿ ಜೊತೆ ವಿಲೀನವಾಗುವ ಸೂಚನೆಯನ್ನು ನೀಡುತ್ತಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಫುಲ್ಪುರ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್ ಬಿಜೆಪಿಯ ಕೌಶಲೇಂದ್ರ ಸಿಂಗ್ ಪಟೇಲ್‌ರನ್ನು 59,613 ಮತಗಳ ಅಂತರದಿಂದ ಸೋಲಿಸಿದರೆ, ಗೋರಖ್‌ಪುರದಲ್ಲಿ ಬಿಜೆಪಿಯ ಉಪೇಂದ್ರ ದತ್ತ್ ಶುಕ್ಲರನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿ ಪವೀಣ್ ಕುಮಾರ್ ನಿಶದ್ ಲಕ್ಷಕ್ಕೂ ಅಧಿಕ ಅಂತರದಿಂದ ಮಣಿಸಿದ್ದಾರೆ.

ಗೋರಖ್‌ಪುರ ಮತ್ತು ಫುಲ್ಪುರ್ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್ಪಿ ಸಹಾಯದಿಂದ ಎಸ್ಪಿ ಗೆಲುವು ಸಾಧಿಸಿರುವುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ನಿಯಂತ್ರಿಸಲು ಪ್ರತಿಪಕ್ಷಗಳು ಒಟ್ಟಾಗುವ ಸಾಧ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಕೆಲದಿನಗಳ ಹಿಂದಷ್ಟೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿಪಕ್ಷಗಳ ನಾಯಕರಿಗೆ ಭೋಜನ ಕೂಟವನ್ನು ಏರ್ಪಡಿಸುವ ಮೂಲಕ ಪ್ರತಿಪಕ್ಷಗಳು ಪರಸ್ಪರ ಕೈಜೋಡಿಸುವ ಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.

ಸೋಲಿನ ಭೀತಿ: ಮಾಧ್ಯಮಗಳ ಮೇಲೆ ನಿರ್ಬಂಧ

ಬುಧವಾರದಂದು ಗೋರಖ್‌ಪುರ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಹಿನ್ನಡೆ ಸಾಧಿಸಿರುವ ಮಾಹಿತಿಗಳು ಹೊರಬರುತ್ತಿದ್ದಂತೆ ಸ್ಥಳೀಯಾಡಳಿತವು ಮಾಧ್ಯಮಗಳ ಮೇಲೆ ನಿಷೇಧ ಹೇರಿದ ಘಟನೆ ನಡೆಯಿತು. ಗೋರಖ್‌ಪುರ ವಿಶ್ವವಿದ್ಯಾಲಯದ ಕಾಮರ್ಸ್ ವಿಭಾಗದಲ್ಲಿ ಮತ ಎಣಿಕೆ ನಡೆಯುತ್ತಿದ್ದ ವೇಳೆ ಅಲ್ಲಿಗಾಗಮಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರುಟೇಲ, ಮತ ಎಣಿಕೆಯ ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡದಂತೆ ಚುನಾವಣಾ ಸಿಬ್ಬಂದಿಗೆ ಸೂಚಿಸಿದ್ದಾರೆ. ಚುನಾವಣಾ ಆಯೋಗದಿಂದ ವಿಶೇಷ ಚುನಾವಣಾ ಚೀಟಿಗಳನ್ನು ಪಡೆದಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಮತ ಎಣಿಕೆ ಸ್ಥಳದಿಂದ ಹದಿನೈದು ಅಡಿ ದೂರದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ಈ ಪ್ರದೇಶವನ್ನು ಪರದೆಯಿಂದ ಮುಚ್ಚಲಾಗಿತ್ತು. ಇಂಥ ಘಟನೆ ಈ ಹಿಂದೆ ಎಂದೂ ನಡೆದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News