29 ವರ್ಷಗಳಿಂದ ಬಿಜೆಪಿ ಕೈಯಲ್ಲಿದ್ದ ಗೋರಖ್ ಪುರ ಕೇತ್ರವನ್ನು ಕಿತ್ತುಕೊಂಡ 29ರ ಹರೆಯದ ಇಂಜಿನಿಯರ್

Update: 2018-03-15 07:11 GMT

 ಲಕ್ನೋ, ಮಾ.15: ಉತ್ತರ ಪ್ರದೇಶದ ಗೋರಖ್ ಪುರ ಲೋಕಸಭಾ ಕ್ಷೇತ್ರದ ಪಾಲಿಗೆ 29 ಮಹತ್ವದ ಸಂಖ್ಯೆಯಾಗಿದೆ. ಕಳೆದ 29 ವರ್ಷಗಳಿಂದ ಬಿಜೆಪಿ ಕೈಯಲ್ಲಿದ್ದ ಗೋರಖ್ ಪುರ ಕ್ಷೇತ್ರ ಬುಧವಾರ ಕೈ ತಪ್ಪಿದ್ದು, ಸಮಾಜವಾದಿ ಪಕ್ಷ ಉಪಚುನಾವಣೆಯಲ್ಲಿ ಬಿಜೆಪಿ ಕೈಯಿಂದ ಕಿತ್ತುಕೊಂಡಿದೆ.

 29ರ ಹರೆಯದ ಪ್ರವೀಣ್ ಕುಮಾರ್ ನಿಶಾದ್ ಗೋರಖ್ ಪುರದ ನೂತನ ಸಂಸದ.  ಬಿಜೆಪಿ ಕೈಯಲ್ಲಿದ್ದ ಈ ಕ್ಷೇತ್ರವನ್ನು ಕಿತ್ತುಕೊಂಡ ಪ್ರವೀಣ್ ಕುಮಾರ್ ನಿಶಾದ್  ಹೀರೊ ಆಗಿದ್ದಾರೆ. ಒಂದು ರೀತಿಯಲ್ಲಿ ಕ್ಷೇತ್ರಕ್ಕೆ ಅಪರಿಚಿತನಾಗಿದ್ದ ನಿಶಾದ್ ಅವರ ಗೆಲುವು ಸಮಾಜವಾದಿ ಪಕ್ಷಕ್ಕೂ ಅಚ್ಚರಿಯನ್ನುಂಟು ಮಾಡಿದೆ.

 ಮತದಾರರು ನಿಶಾದ್ ಗೆ ಆಶೀರ್ವಾದ ಮಾಡಿದ್ದಾರೆ.  ಆದಿತ್ಯನಾಥ್ ಸತತ ಐದು  ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಗೋರಖ್ ಪುರ ಕ್ಷೇತ್ರ ದಲ್ಲಿ ಪ್ರವೀಣ್ ಕುಮಾರ್ ಅವರು ಬಿಜೆಪಿಯ ಉಪೇಂದ್ರ ದತ್ ಶುಕ್ಲಾ ಅವರನ್ನು 21,881 ಮತಗಳ ಅಂತತರದಿಂದ ಸೋಲಿಸಿ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.  

ಗೋರಖ್ ಪುರ ಕ್ಷೇತ್ರದ ನೂತನ ಸಂಸದ ಪ್ರವೀಣ್ ಕುಮಾರ್ ಓರ್ವ   ಇಂಜಿನಿಯರ್. 2011ರಲ್ಲಿ ಲಕ್ನೋದ ಗೌತಮ್ ಬುದ್ದ ವಿವಿಯಿಂದ ಪದವಿ ಪಡೆದಿರುವ ಪ್ರವೀಣ್ ಕುಮಾರ್ ಅವರು ಕಳಂಕರಹಿತ ವ್ಯಕ್ತಿ. ಅವರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ. ಅವರು ಚುನಾವಣಾ ಆಯ್ಕೆ ಸಲ್ಲಿಸಿರುವ ದಾಖಲೆಯಂತೆ ಅವರು 11 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಬ್ಯಾಂಕ್ ನಿಂದ 99 ಸಾವಿರ ರೂ. ಸಾಲ ಪಡೆದಿದ್ದಾರೆ.

ಪ್ರವೀಣ್ ಕುಮಾರ್ ಪತ್ನಿ ಸರಕಾರಿ ಉದ್ಯೋಗಿ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಗೋರಖ್ ನಾಥ್ ಮಠಾಧೀಶ  ಯೋಗಿ ಆದಿತ್ಯನಾಥ್ ಅವರುಮುಖ್ಯ ಮಂತ್ರಿಯಾಗಿ ತೆರವುಗೊಳಿಸಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಗೋರಖ್ ಪುರ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಮರ್ಮಘಾತ ನೀಡಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಮುಖ್ಯ ಮಂತ್ರಿ ಆದಿತ್ಯನಾಥ್ ಅವರಿಗೆ ಚುನಾವಣೆಯ ಫಲಿತಾಂಶ ಆಘಾತ ನೀಡಿದೆ.

 ಆದಿತ್ಯನಾಥ್   1998ರಲ್ಲಿ ನಡೆದಿದ್ದ 12ನೇ ಲೋಕಸಭಾ ಚುನಾವಣೆಯಲ್ಲಿ ಗೋರಖ್ ಪುರ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಮೊದಲ ಬಾರಿ ಸಂಸತ್ತು ಪ್ರವೇಶಿಸಿದ್ದರು.. ಆನಂತರ, 1999, 2004, 2009 ಹಾಗೂ 2014ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಸತತ ನಾಲ್ಕು ಬಾರಿಗೆ ಗೋರಖ್ ಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಆದಿತ್ಯನಾಥ್ ಅವರನ್ನು ಸೋಲಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ. ಇದೀಗ ತೆರವುಗೊಳಿಸಿದ ಕ್ಷೇತ್ರ ಬಿಜೆಪಿ ಕೈ ಜಾರಿದೆ. ಮೋದಿ, ಶಾ ಮತ್ತು ಆದಿತ್ಯನಾಥ್ ತಂತ್ರ ಸಮಾಜವಾದಿ  ಮತ್ತು ಬಿಎಸ್ಪಿ ಮೈತ್ರಿಕೂಟದ ರಣತಂತ್ರದ ಮುಂದೆ ಫಲ ನೀಡಲಿಲ್ಲ. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೂ, ಆಂತರಿಕವಾಗಿ ಎಸ್ಪಿ –ಬಿಎಸ್ ಪಿಯನ್ನು ಬೆಂಬಲಿಸಿತ್ತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News