ಶಿವಮೊಗ್ಗ: ಹಲವೆಡೆ ಮೋಡ ಕವಿದ ವಾತಾವರಣ, ತುಂತುರು ಮಳೆ

Update: 2018-03-15 13:12 GMT

ಶಿವಮೊಗ್ಗ, ಮಾ. 15: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ದಿಢೀರ್ ವಾಯುಭಾರ ಕುಸಿತದ ಪರಿಣಾಮ ಮಲೆನಾಡಿನ ಮೇಲೂ ಬೀರಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ಕೆಲವೆಡೆ ತುಂತುರು ಮಳೆಯೂ ಆಗಿದೆ. ಹಾಗೆಯೇ ತಾಪಮಾನದ ಪ್ರಮಾಣದಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. 

ಗುರುವಾರ ಮಧ್ಯಾಹ್ನ ಶಿವಮೊಗ್ಗ ನಗರದಲ್ಲಿ ತುಂತುರು ಮಳೆಯಾಯಿತು. ಸಂಪೂರ್ಣ ಮೋಡ ಕವಿದ ವಾತಾವರಣ ಕಂಡುಬಂದಿತು. ಬುಧವಾರ ರಾತ್ರಿ ಕೂಡ ಇದೇ ವಾತಾವರಣ ನಗರದಲ್ಲಿ ಕಂಡುಬಂದಿತು. ಇತ್ತೀಚೆಗೆ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ನಾಗರೀಕರು, ಕಳೆದೆರೆಡು ದಿನಗಳಿಂದ ಮನೆ ಮಾಡಿರುವ ತಣ್ಣನೆಯ ವಾತಾವರಣದಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. 

ಜಿಲ್ಲೆಯ ಇತರೆಡೆಯೂ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆಯಾದ ವರದಿಗಳು ಬಂದಿವೆ. 'ಅರಬ್ಬಿ ಸಮುದ್ರದಲ್ಲಿ  ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಪ್ರದೇಶದ ಹಲವೆಡೆ ತುಂತುರು ಮಳೆಯಾಗುತ್ತಿದೆ. ಮುಂದಿನ ಒಂದೆರೆಡು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ' ಎಂದು ಹವಮಾನ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 

ಕಳೆದ ಸುಮಾರು ಒಂದೆರೆಡು ತಿಂಗಳಿನಿಂದ ಜಿಲ್ಲೆಯಾದ್ಯಂತ ತಾಪಮಾನದ ಪ್ರಮಾಣದಲ್ಲಿ ಏರಿಕೆ ಕಂಡುಬಂದಿತ್ತು. ಸುಡು ಬಿಸಿಲಿಗೆ ತತ್ತರಿಸಿ ಹೋಗಿದ್ದ ಜಿಲ್ಲೆಯ ನಾಗರೀಕರಿಗೆ ಕಳೆದೆರೆಡು ದಿನಗಳಿಂದ ಮನೆ ಮಾಡಿರುವ ತಂಪನೆಯ ವಾತಾವರಣವು ನಿರಾಳತೆಯ ಭಾವ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News