ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಮ್‌ ಶ್ರೇಷ್ಠ ಸಮಾಜ ಸುಧಾರಕ: ರಾಹುಲ್

Update: 2018-03-15 14:20 GMT

ಲಕ್ನೊ , ಮಾ.15: ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ದ ಸಂಸ್ಥಾಪಕ ಕಾನ್ಶಿರಾಮ್ ಓರ್ವ ಶ್ರೇಷ್ಠ ಸಮಾಜ ಸುಧಾರಕರಾಗಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ.

 ದಿವಂಗತ ಕಾನ್ಶಿರಾಮ್ ಅವರ 84ನೇ ಜನ್ಮದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್, ಶ್ರೇಷ್ಠ ಸಮಾಜ ಸುಧಾರಕರಾಗಿದ್ದ ಕಾನ್ಶಿರಾಮ್, ತುಳಿತಕ್ಕೊಳಗಾದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಡೆಸಿದ ಅವಿಶ್ರಾಂತ ಪ್ರಯತ್ನವು ಇಂದು ಭಾರತೀಯ ಸಮಾಜವ್ಯವಸ್ಥೆಯಲ್ಲಿ ಶಾಶ್ವತ ಗುರುತನ್ನು ಮೂಡಿಸಿದೆ ಎಂದು ಹೇಳಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಎಸ್ಪಿ ಬೆಂಬಲ ಪಡೆದ ಸಮಾಜವಾದಿ ಪಕ್ಷ ಬಿಜೆಪಿಗೆ ಸೋಲುಣಿಸಿದ ಸಾಧನೆಗೈದ ಮರುದಿನ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದು ಬಿಎಸ್ಪಿ ನಾಯಕಿ ಮಾಯಾವತಿಯ ಮನವೊಲಿಸಲು ಕಾಂಗ್ರೆಸ್ ನಡೆಸಿದ ಪ್ರಯತ್ನ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ಹಿಂದೆ ಉತ್ತರಪ್ರದೇಶ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿದ್ದು, ಈ ರಾಜ್ಯದಿಂದಲೇ ಕಾಂಗ್ರೆಸ್‌ನ 80 ಅಭ್ಯರ್ಥಿಗಳು ಲೋಕಸಭೆಗೆ ಆರಿಸಿ ಬಂದಿದ್ದರು. ಆದರೆ ಇದೀಗ ನಡೆದ ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ಠೇವಣಿಯನ್ನೂ ಕಳೆದುಕೊಂಡಿದ್ದಾರೆ. 2017ರಲ್ಲಿ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಆದರೆ ಮೈತ್ರಿಕೂಟಕ್ಕೆ ಹೀನಾಯ ಸೋಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News