ಮೋದಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ: ವೈಎಸ್‌ಆರ್ ಕಾಂಗ್ರೆಸ್ ಗೆ ಟಿಡಿಪಿ ಬೆಂಬಲ?

Update: 2018-03-15 16:55 GMT

ಹೈದರಾಬಾದ್, ಮಾ.15: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ತಮ್ಮ ಕೋರಿಕೆಯನ್ನು ಪುರಸ್ಕರಿಸದ ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವೈಎಸ್‌ಆರ್ ಕಾಂಗ್ರೆಸ್ ನಿರ್ಧರಿಸಿದೆ. ವೈಎಸ್‌ಆರ್ ಕಾಂಗ್ರೆಸ್‌ನ ಆರು ಸಂಸದರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿದ್ದಾರೆ.

ಲೋಕಸಭಾ ಸ್ಪೀಕರ್ ಕೆಳಮನೆಯಲ್ಲಿ ವಿಶ್ವಾಸ ಮತಕ್ಕೆ ಆಗ್ರಹಿಸಲು ವೈಎಸ್‌ಆರ್ ಕಾಂಗ್ರೆಸ್‌ಗೆ ಇನ್ನೂ ಕನಿಷ್ಟ 54 ಸಂಸದರ ಬೆಂಬಲದ ಅಗತ್ಯವಿದೆ. ಅದಕ್ಕಾಗಿ ಪಕ್ಷವು ಇತರ ಪಕ್ಷಗಳ ಬೆಂಬಲಕ್ಕೆ ಮನವಿ ಮಾಡುತ್ತಿದ್ದು, ಚಂದ್ರಬಾಬು ನಾಯ್ಡು ಅವರ ಟಿಡಿಪಿ ಕೂಡಾ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬೇಡಿಕೆಯು ಇತ್ತೀಚಿನ ದಿನಗಳಲ್ಲಿ ತೀವ್ರಗೊಂಡಿತ್ತು. ಕೆಲದಿನಗಳ ಹಿಂದೆ ತೆಲುಗುದೇಶಂ ಪಕ್ಷದ ಇಬ್ಬರು ಸಂಸದರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಸದ್ಯ ಟಿಡಿಪಿ ಈಗಲೂ ಎನ್‌ಡಿಎಯ ಮಿತ್ರಪಕ್ಷವಾಗಿ ಮುಂದುವರಿದಿದೆ. ಟಿಡಿಪಿ ಅಧ್ಯಕ್ಷ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶುಕ್ರವಾರದಂದು ಪಕ್ಷದ ನೀತಿನಿರ್ಣಯ ಮಂಡಳಿಯ ಸಭೆಯನ್ನು ಕರೆದಿದ್ದು, ಈ ಸಭೆಯಲ್ಲಿ ಎನ್‌ಡಿಎ ತೊರೆಯುವ ಬಗ್ಗೆ ಅಂತಿನ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಎನ್‌ಡಿಎ ತೊರೆಯುವಂತೆ ಈಗಾಗಲೇ ಟಿಡಿಪಿಯ ಬಹುತೇಕ ಶಾಸಕರು, ಸಂಸದರು ಮತ್ತು ಹಿರಿಯ ನಾಯಕರು ನಾಯ್ಡು ಮೇಲೆ ಒತ್ತಡ ಹೇರಿದ್ದಾರೆ ಎಂದು ವರದಿ ತಿಳಿಸಿದೆ. ಗುರುವಾರದಂದು ಈ ಕುರಿತು ಮಾತನಾಡಿದ ನಾಯ್ಡು, ಬಿಜೆಪಿ ಮತ್ತು ನರೇಂದ್ರ ಮೋದಿಯವರು ವೈಎಸ್‌ಆರ್ ಕಾಂಗ್ರೆಸ್ ಹಾಗೂ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷವನ್ನು ಟಿಡಿಪಿಯ ವಿರುದ್ಧ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತಮಿಳುನಾಡಿನಲ್ಲಿ ಎಐಎಡಿಎಂಕೆಯ ಇ.ಪಳನಿಸ್ವಾಮಿ ವಿರುದ್ಧ ಒ. ಪನ್ನೀರ್‌ಸೆಲ್ವಂ ಬಣವನ್ನು ಎತ್ತಿಕಟ್ಟಿದ ಮಾದರಿಯಲ್ಲೇ ಆಂಧ್ರದಲ್ಲೂ ನಮ್ಮ ವಿರುದ್ಧ ಭಿನ್ನಾಭಿಪ್ರಾಯ ಮೂಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದೇ ವೇಳೆ, ಉತ್ತರ ಪ್ರದೇಶ ಮತ್ತು ಬಿಹಾರದ ಉಪಚುನಾವಣಾ ಫಲಿತಾಂಶಗಳ ಬಗ್ಗೆ ಮಾತನಾಡಿದ ನಾಯ್ಡು, ಈ ಫಲಿತಾಂಶಗಳು ಬಿಜೆಪಿ ಹಾಗೂ ಮೋದಿ ವಿರುದ್ಧ ಅಲೆಯಿರುವುದನ್ನು ಸೂಚಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ-ಟಿಡಿಪಿ ಮೈತ್ರಿಗೆ ಬೆಂಬಲ ಸೂಚಿಸಿದ್ದ ಪವನ್ ಕಲ್ಯಾಣ್‌ರ ಜನಸೇನಾ ಪಕ್ಷ ನಂತರ ಟಿಡಿಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡಿತ್ತು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತವರ ಪುತ್ರ ಲೊಕೇಶ್ ನಾಯ್ಡು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಅಸಮರ್ಥ ಸರಕಾರವನ್ನು ನಡೆಸುತ್ತಿದ್ದಾರೆ ಎಂದು ಬುಧವಾರದಂದು ಗುಂಟೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪವನ್ ಕಲ್ಯಾಣ್ ಆರೋಪಿಸಿದ್ದರು. ನಟನ ಈ ನೇರ ಆರೋಪವು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಕಲ್ಯಾಣ್ ಈ ಹೇಳಿಕೆಯನ್ನು ಬಿಜೆಪಿಯ ಸೂಚನೆಯಂತೆ ನೀಡಿದ್ದಾರೆ ಎಂದು ಟಿಡಿಪಿ ಬಲವಾಗಿ ನಂಬಿದೆ. ಹಾಗಾಗಿ ಕೇಂದ್ರದಲ್ಲಿ ಕೇಸರಿಪಡೆಯ ಜೊತೆ ಮೈತ್ರಿಯನ್ನು ಕಡಿದುಕೊಳ್ಳಲು ಅದು ನಿರ್ಧರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಯುವಜನತೆಯ ಮಧ್ಯೆ ಬಹಳ ಜನಪ್ರಿಯರಾಗಿರುವ ಪವನ್ ಕಲ್ಯಾಣ್ ಮತಗಳನ್ನು ಸೆಳೆಯುವಲ್ಲಿ ಸಫಲವಾದರೆ ನಾಯ್ಡು ಪಕ್ಷಕ್ಕೆ ತೀವ್ರ ಹಿನ್ನಡೆಯಾಗಲಿದೆ ಎಂದೇ ಅಂದಾಜಿಸಲಾಗಿದೆ. 2014ರಲ್ಲೂ ಜನಸೇನಾ ಪಕ್ಷದ ಬೆಂಬಲದ ಕಾರಣದಿಂದಲೇ ಟಿಡಿಪಿ ರಾಜ್ಯದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಲು ಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡುಗೆ ಪವನ್ ಕಲ್ಯಾಣ್‌ರ ಏರುತ್ತಿರುವ ಜನಪ್ರಿಯತೆ ತಲೆನೋವಾಗಿ ಪರಿಣಮಿಸಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News