ಮಹಾರಾಷ್ಟ್ರ ಸರಕಾರದಿಂದ ಅಧಿಕಾರ ದುರುಪಯೋಗ: ಮಾಜಿ ಡಿಜಿಪಿ ಟೀಕೆ

Update: 2018-03-15 17:01 GMT

ಮುಂಬೈ, ಮಾ.15: ಭೀಮ-ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧದ ಮೊಕದ್ದಮೆಗಳನ್ನು ವಾಪಸು ಪಡೆಯುವ ರಾಜ್ಯ ಸರಕಾರದ ನಿರ್ಧಾರವನ್ನು ಮಾಜಿ ಡಿಜಿಪಿ ಜೂಲಿಯೊ ರಿಬೆರೊ ಟೀಕಿಸಿದ್ದಾರೆ. ಈ ರೀತಿ ಮಾಡುವ ಮೂಲಕ ಸರಕಾರ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದರ ಬದಲು ಅಧಿಕಾರವನ್ನು ವಿವೇಚನಾಯುಕ್ತವಾಗಿ ಬಳಸಿಕೊಳ್ಳುವಂತೆ ಅವರು ದೇವೇಂದ್ರ ಫಡ್ನವೀಸ್ ನೇತೃತ್ವದ ಸರಕಾರಕ್ಕೆ ಸಲಹೆ ನೀಡಿದರು. ತಾನು ಯಾವುದೇ ಪಕ್ಷದ ವಿರೋಧಿಯಲ್ಲ. ಆದರೆ ಬಂದ್‌ಗೆ ಕರೆ ನೀಡಿರುವುದೇ ಅಕ್ರಮವಾಗಿದೆ ಎಂದು ರಿಬೆರೊ ಹೇಳಿದ್ದಾರೆ. 

ಭೀಮಾ ಕೊರೆಗಾಂವ್ ಚಳವಳಿಯ ಬಳಿಕ ಕರೆ ನೀಡಲಾದ ರಾಜ್ಯ ಬಂದ್ ಸಂದರ್ಭ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ದಾಖಲಿಸಲಾಗಿರುವ ಎಲ್ಲಾ ಮೊಕದ್ದಮೆಗಳನ್ನೂ ವಾಪಸು ಪಡೆಯಲು ನಿರ್ಧರಿಸಲಾಗಿದೆ ಎಂದು ಮಾರ್ಚ್ 13ರಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಧಾನಸಭೆಯಲ್ಲಿ ಘೋಷಿಸಿದ್ದರು. ಗಂಭೀರ ಪ್ರಕರಣದ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಿತಿಯು ನಿರ್ಧರಿಸಲಿದ್ದು, ಮೂರು ತಿಂಗಳೊಳಗೆ ವರದಿ ಸಲ್ಲಿಸಲಿದೆ ಎಂದು ಫಡ್ನವೀಸ್ ತಿಳಿಸಿದ್ದರು.

ಜನವರಿ 1ರಂದು ಭೀಮ ಕೊರೆಗಾಂವ್ ಯುದ್ದದ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೋರೆಗಾಂವ್ ಎಂಬಲ್ಲಿ ಸಭೆ ಸೇರಿದ್ದ ದಲಿತರ ಮೇಲೆ ಕೇಸರಿ ಧ್ವಜ ಹಿಡಿದಿದ್ದ ಕೆಲವು ವ್ಯಕ್ತಿಗಳು ಕಲ್ಲೆಸೆದಿದ್ದರು ಎನ್ನಲಾಗಿದ್ದು, ಇದರಿಂದ ಗಲಭೆ ಸ್ಫೋಟಗೊಂಡಿದೆ. ಗಲಭೆಯಲ್ಲಿ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದ. ಮಿಲಿಂದ್ ಏಕ್‌ಬೋಟೆ ಮತ್ತು ಸಯ್ಯೋಜಿ ಭಿಡೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News