ಆತ್ಮಹತ್ಯೆಯ ಲೈವ್ ರೆಕಾರ್ಡ್ ಮಾಡಿದ ಐಟಿಐ ವಿದ್ಯಾರ್ಥಿ!

Update: 2018-03-16 04:40 GMT

ಹೈದರಾಬಾದ್, ಮಾ.16: ಪ್ರೇಮ ಸಂಬಂಧದ ವಿಚಾರದಲ್ಲಿ ಬೇಸತ್ತ ಇಲ್ಲಿನ ಐಟಿಐ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಯನ್ನು ಲೈವ್ ರೆಕಾರ್ಡ್ ಮಾಡಿಕೊಂಡು ಸಾವಿಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಸಂಜೆ ಈತನ ಆತ್ಮಹತ್ಯೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ.

ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ಅಜ್ಮೀರ್ ಸಾಗರ್ (20), ವಾಟ್ಸ್‌ಆ್ಯಪ್‌ನಲ್ಲಿ ಹುಡುಗಿಯೊಬ್ಬಳಿಗೆ ವೀಡಿಯೊ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಸನತ್‌ ನಗರದ ಸರ್ಕಾರಿ ಐಟಿಐನಲ್ಲಿ ಓದುತ್ತಿದ್ದ. ಪಕ್ಕದ ವಿನಾಯಕ ನಗರ ಎಂಬಲ್ಲಿ ಅಕ್ಕನ ಮನೆಯಲ್ಲಿ ವಾಸವಿದ್ದ. ಸಾಗರ್ 17 ವರ್ಷದ ಹುಡುಗಿಯೊಬ್ಬಳನ್ನು ಇಷ್ಟಪಟ್ಟಿದ್ದ ಎನ್ನಲಾಗಿದ್ದು, ಈತನ ಪ್ರಸ್ತಾವವನ್ನು ಆಕೆ ನಿರಾಕರಿಸಿದ್ದಳು. ಜತೆಗೆ ಆತನ ಕುಟುಂಬದವವರು ಕೂಡಾ ಈ ಸಂಬಂಧಕ್ಕೆ ಮತ್ತು ಆ ಹುಡುಗಿನ ಜತೆ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಬುಧವಾರ ಬೆಳಗ್ಗೆ 10:41ಕ್ಕೆ ಸಾಗರ್ ಮನೆಯಲ್ಲಿ ಒಬ್ಬನೇ ಇದ್ದಾಗ ಹುಡುಗಿಗೆ ಎಸ್ಸೆಮ್ಮೆಸ್ ಕಳುಹಿಸಿ, ವೀಡಿಯೊ ಕರೆ ಸಂಪರ್ಕ ಮಾಡುವಂತೆ ಹೇಳಿ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ.

ಹುಡುಗಿಗೆ ಕರೆ ಮಾಡುವ ಮುನ್ನ ಮತ್ತೊಂದು ಮೊಬೈಲ್ ಅಪ್ಲಿಕೇಶನ್ ಆನ್ ಮಾಡಿ, ವೀಡಿಯೋ ರೆಕಾರ್ಡ್ ಮಾಡುವ ವ್ಯವಸ್ಥೆ ಮಾಡಿದ್ದ. ನಂತರ ವೀಡಿಯೊ ಕಾಲ್ ಮಾಡಿ, ಸ್ನೇಹಿತೆಯ ಜತೆ ಇದ್ದ ಹುಡುಗಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ. ಗುರುವಾರ ಸಾಗರ್‌ನ ಅಕ್ಕ ಮಾಡಿದ ಕರೆಯನ್ನು ಮನೆಯ ಮಾಲಕ ಸ್ವೀಕರಿಸಿದರು. ಮಂಗಳವಾರದಿಂದ ಆತ ಕರೆ ಸ್ವೀಕರಿಸುತ್ತಿಲ್ಲ. ಆತ ಮನೆಯಲ್ಲಿದ್ದಾನೆಯೇ ಎಂಬ ಪರಿಶೀಲಿಸುವಂತೆ ಅಕ್ಕನಿಗೆ ಸೂಚಿಸಿದರು. ಮನೆಯ ಬಾಗಿಲು ಒಡೆದು ನೋಡಿದಾಗ ಸಾಗರ್ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿರುವುದು ಗಮನಕ್ಕೆ ಬಂದಿದೆ. ಮೊಬೈಲ್ ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಫೆಬ್ರವರಿ 18ರಂದು 24 ವರ್ಷದ ಯುವತಿಯೊಬ್ಬಳು ಫೇಸ್‌ಬುಕ್‌ನಲ್ಲಿ ಸ್ನೇಹಿತನ ಜತೆ ವೀಡಿಯೊ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News