ಮತ್ತೊಮ್ಮೆ ಶಂಕಾಸ್ಪದ ಬೌಲಿಂಗ್ ಸುಳಿಗೆ ಸಿಲುಕಿದ ಸುನೀಲ್ ನರೇನ್

Update: 2018-03-16 05:42 GMT

ದುಬೈ, ಮಾ.16: ವೆಸ್ಟ್‌ಇಂಡೀಸ್ ಸ್ಪಿನ್ನರ್ ಸುನೀಲ್ ನರೇನ್ ಈಗ ಯುಎಇಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಮತ್ತೊಮ್ಮೆ ಶಂಕಾಸ್ಪದ ಬೌಲಿಂಗ್ ಶೈಲಿಯ ಆರೋಪದ ಸುಳಿಗೆ ಸಿಲುಕಿದ್ದಾರೆ.

29ರ ಹರೆಯದ ನರೇನ್ ಪಿಎಸ್‌ಎಲ್‌ನಲ್ಲಿ ಲಾಹೋರ್ ಕ್ವಾಲ್ಯಾಂಡರ್ಸ್ ತಂಡದ ಪರ ಆಡುತ್ತಿದ್ದಾರೆ.

‘‘ಶಾರ್ಜಾದಲ್ಲಿ ಬುಧವಾರ ನಡೆದ ಲಾಹೋರ್ ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಗಳ ನಡುವೆ ನಡೆದ ಪಂದ್ಯದ ವೇಳೆ ನರೇನ್ ಬೌಲಿಂಗ್ ಶೈಲಿಯ ಬಗ್ಗೆ ಅಂಪೈರ್‌ಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಮ್ಯಾಚ್ ಅಧಿಕಾರಿಗಳು ನರೇನ್ ಬೌಲಿಂಗ್ ಶೈಲಿಯ ಕುರಿತ ವರದಿಯನ್ನು ಕ್ರಿಕೆಟ್ ವೆಸ್ಟ್‌ಇಂಡೀಸ್‌ಗೆ ಕಳುಹಿಸಿಕೊಟ್ಟಿದ್ದಾರೆ’’ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.

ನರೇನ್ ವಿಂಡೀಸ್ ಪರ 6 ಟೆಸ್ಟ್, 65 ಏಕದಿನ ಹಾಗೂ 48 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 2014ರಲ್ಲಿ ಚಾಂಪಿಯನ್ಸ್ ಲೀಗ್ ವೇಳೆ ನರೇನ್ ಮೊದಲ ಬಾರಿ ಶಂಕಾಸ್ಪದ ಬೌಲಿಂಗ್ ಶೈಲಿಗೆ ಆರೋಪಕ್ಕೆ ಸಿಲುಕಿದ್ದರು. ಮುಂಜಾಗೃತಾ ಕ್ರಮವಾಗಿ 2015ರ ವಿಶ್ವಕಪ್‌ನಿಂದ ನರೇನ್ ಹೊರಗುಳಿದಿದ್ದರು.

2016ರಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದ ವೇಳೆ ಬೌಲಿಂಗ್ ಶೈಲಿಯ ಬಗ್ಗೆ ಇದೇ ರೀತಿಯ ಆರೋಪ ಎದುರಿಸಿದ್ದ ನರೇನ್ 2016ರ ಎಪ್ರಿಲ್‌ನಲ್ಲಿ ದೋಷ ಮುಕ್ತರಾಗಿ ಐಪಿಎಲ್‌ನಲ್ಲಿ ಆಡಿದ್ದರು. ಇದೀಗ 2018ರ ಐಪಿಎಲ್ ಹತ್ತಿರವಾಗುತ್ತಿರುವ ವೇಳೆ ಮತ್ತೊಮ್ಮೆ ಶಂಕಾಸ್ಪದ ಬೌಲಿಂಗ್ ಶೈಲಿಯ ಆರೋಪ ಎದುರಿಸುತ್ತಿದ್ದಾರೆ. ಮುಂದಿನ ತಿಂಗಳು ಆರಂಭವಾಗಲಿರುವ ಐಪಿಎಲ್‌ನಲ್ಲಿ ನರೇನ್ ಕೆಕೆಆರ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News