ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ: ಬಿಜೆಪಿ

Update: 2018-03-16 14:55 GMT

ಹೊಸದಿಲ್ಲಿ, ಮಾ.16: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬೇಡಿಕಯನ್ನು ಈಡೇರಿಸದ ಕಾರಣ ಮೋದಿ ನೇತೃತ್ವದ ಎನ್‌ಡಿಎ ಸರಕಾರದಿಂದ ಶುಕ್ರವಾರ ಹೊರಬಂದಿರುವ ತೆಲುಗುದೇಶಂ ಪಕ್ಷವು (ಟಿಡಿಪಿ) ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದೆ. ಟಿಡಿಪಿಯ ಎದುರಾಳಿ ಪಕ್ಷ ವೈಎಸ್‌ಆರ್ ಕಾಂಗ್ರೆಸ್ ಗುರುವಾರದಂದು ಮೋದಿ ಸರಕಾರವ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯ ನೋಟಿಸ್ ಜಾರಿ ಮಾಡಿತ್ತು. ಮಿತ್ರಪಕ್ಷವೊಂದು ಸಂಬಂಧ ಕಡಿದುಕೊಳ್ಳುತ್ತಿರುವುದು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ನಡೆದ ಉಪಚುನಾವಣೆಗಳಲ್ಲಿ ಆಘಾತ ಅನುಭವಿಸಿರುವ ಬಿಜೆಪಿಗೆ ಮತ್ತಷ್ಟು ಮಾನಸಿಕ ಹೊಡೆತವನ್ನು ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ್, ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ. ಅವಿಶ್ವಾಸ ಮಂಡನೆ, ವಿಶ್ವಾಸ ನಿರ್ಣಯ ಅಥವಾ ಸದನದಲ್ಲಿ ಇನ್ಯಾವುದೇ ಚರ್ಚೆಗೂ ನಾವು ಸಿದ್ಧ ಎಂದು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಸ್ಪೀಕರ್ ಸುಮಿತ್ರಾ ಮಹಾಜನ್ ವೈಎಸ್‌ಆರ್ ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯದ ನೋಟಿಸ್‌ಅನ್ನು ತೆಗೆದುಕೊಂಡರು. ಆದರೆ ಸದ್ಯ ಸದನವು ವ್ಯವಸ್ಥಿತವಾಗಿಲ್ಲ ಎಂದು ಹೇಳುವ ಮೂಲಕ ಈ ಬಗೆಗಿನ ನಿರ್ಧಾರವನ್ನು ಸೋಮವಾರಕ್ಕೆ ಮುಂದೂಡಿದರು. ಈ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಟಿಡಿಪಿಯು ಎನ್‌ಡಿಎ ಜೊತೆಗಿನ ಮೈತ್ರಿ ಕಡಿದುಕೊಳ್ಳುತ್ತಿರುವ ಬಗ್ಗೆ ಹೇಳಿಕೆ ನೀಡಿದ ತಕ್ಷಣ ಪಕ್ಷದ ಸದಸ್ಯರು ‘ತಲಾಕ್, ತಲಾಕ್, ತಲಾಕ್’ ಎನ್ನುವ ಮೂಲಕ ಘೋಷಣೆಗಳನ್ನು ಕೂಗಿದರು. ಆರಂಭದಲ್ಲಿ ವೈಎಸ್‌ಆರ್ ಕಾಂಗ್ರೆಸ್‌ನ ಅವಿಶ್ವಾಸ ಗೊತ್ತುವಳಿಯನ್ನು ಬೆಂಬಲಿಸಲು ಯೋಚಿಸಿದ್ದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ನಂತರ ಸ್ವತಂತ್ರವಾಗಿ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿದರು. ಮುಂದಿನ ವರ್ಷ ನಡೆಯಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಂಧ್ರಪ್ರದೇಶದ ಜನರನ್ನು ಗಮನದಲ್ಲಿಟ್ಟು ಟಿಡಿಪಿ ಮತ್ತು ವೈಎಸ್‌ಆರ್ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಲೋಕಸಭೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಒಂಬತ್ತು ಸದಸ್ಯ ಬಲವನ್ನು ಹೊಂದಿದ್ದರೆ ಟಿಡಿಪಿ 16 ಸದಸ್ಯರನ್ನು ಹೊಂದಿದೆ. ಅವಿಶ್ವಾಸ ನಿರ್ಣಯ ಮಂಡನೆಯನ್ನು ಒಪ್ಪಬೇಕಾದರೆ ಇನ್ನೂ ಕನಿಷ್ಟ 50 ಸದಸ್ಯರ ಬೆಂಬಲದ ಅಗತ್ಯವಿದೆ. ಬಿಜೆಪಿಯು ಟಿಡಿಪಿಯ ನಿರ್ಧಾರದ ಬಗ್ಗೆ ಯಾವುದೇ ಆತಂಕ ವ್ಯಕ್ತಪಡಿಸಿಲ್ಲ. ಟಿಡಿಪಿ ನಮ್ಮ ಜೊತೆ ಮೈತ್ರಿಯನ್ನು ಕಡಿದುಕೊಂಡಿರುವುದು ಆಂಧ್ರಪ್ರದೇಶದಲ್ಲಿ ನಮ್ಮ ಪಕ್ಷ ಬೆಳೆಯಲು ಸಹಕಾರಿಯಾಗಲಿದೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್ ನರಸಿಂಹ್ ರಾವ್ ತಿಳಿಸಿದ್ದಾರೆ.

ಇನ್ನೊಂದು ವರ್ಷದಲ್ಲಿ ಬಿಜೆಪಿಯು ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ ಮತ್ತು ತ್ರಿಪುರದ ಯಶಸ್ಸನ್ನು ಪುನರಾವರ್ತಿಸಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ. ಶಿವಸೇನೆ ಈಗಾಗಲೇ ಮಹಾರಾಷ್ಟ್ರದಲ್ಲಿ ತಾನು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡುವ ಕುರಿತು ಸೇನೆಯು ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ. ಈ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ಇತರ ನಾಯಕರು ಸೇನೆಯ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News