ವಿಐಎಸ್‍ಎಲ್ ಕಾರ್ಖಾನೆ ಅಭಿವೃದ್ದಿಗೆ 3200 ಕೋಟಿ ರೂ. ಬೇಕು: ಕೇಂದ್ರ ಉಕ್ಕು ಸಚಿವ ಚೌದರಿ ಬೀರೇಂದ್ರ ಸಿಂಗ್

Update: 2018-03-16 16:51 GMT

ಶಿವಮೊಗ್ಗ, ಮಾ.16: 'ವಿಶ್ವೇಶ್ವರಯ್ಯ ಕಬ್ಬಿಣ - ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ. ಈ ಸಂಬಂಧ ಉಕ್ಕು ಪ್ರಾಧಿಕಾರದ ಮೂಲಕ ಉನ್ನತ ಮಟ್ಟದ ಅಧ್ಯಯನ ಸಮಿತಿ ರಚನೆ ಮಾಡಲಿದೆ. ಕಾರ್ಖಾನೆ ಉಳಿವಿಗೆ ಸರ್ವ ಪ್ರಯತ್ನ ನಡೆಸಲಿದೆ' ಎಂದು ಕೇಂದ್ರ ಉಕ್ಕು ಖಾತೆ ಸಚಿವ ಚೌದರಿ ಬೀರೇಂದ್ರ ಸಿಂಗ್ ಭರವಸೆ ನೀಡಿದ್ದಾರೆ. 

ಶುಕ್ರವಾರ ಭದ್ರಾವತಿ ಪಟ್ಟಣದ ವಿಐಎಸ್‍ಎಲ್ ಕಾರ್ಖಾನೆಗೆ ಭೇಟಿಯಿತ್ತು ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 'ಕಾರ್ಖಾನೆಯಲ್ಲಿರುವ ಯಂತ್ರೋಪಕರಣಗಳು ಸುಮಾರು 120 ವರ್ಷಗಳಷ್ಟು ಹಳೇಯದಾಗಿವೆ. ಇವುಗಳನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗಿದೆ. ಕಾರ್ಖಾನೆಯ ಪೂರ್ಣ ಅಭಿವೃದ್ದಿಗೆ ಸರಿಸುಮಾರು 3200 ಕೋಟಿ ರೂ.ಗಳಿಗೂ ಹೆಚ್ಚು ಹಣ ಬೇಕಾಗಿದೆ' ಎಂದು ಮಾಹಿತಿ ನೀಡಿದ್ದಾರೆ. 

ಹೂಡಿಕೆ: ಪ್ರಸ್ತುತ ಕಾರ್ಖಾನೆಯನ್ನು ಈಗಿರುವ ಯಥಾಸ್ಥಿತಿಯಲ್ಲಿಯೇ ಅಭಿವೃದ್ದಿಪಡಿಸಲು ಸುಮಾರು 1200 ಕೋಟಿ ರೂ.ಗಳಷ್ಟು ಬಂಡವಾಳ ಅಗತ್ಯವಿದೆ. ಏಕಕಾಲದಲ್ಲಿಯೇ ಇಷ್ಟೊಂದು ದೊಡ್ಡ ಭರಿಸುವುದು ಕಷ್ಟಕರವಾಗಲಿದೆ. ಈ ಕಾರಣದಿಂದ ಕಾರ್ಖಾನೆಯ ಸರ್ವಾಂಗೀಣ ಅಭಿವೃದ್ದಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಯ ವರದಿ ತರಿಸಿಕೊಂಡು, ಹಂತಹಂತವಾಗಿ ಕಾರ್ಖಾನೆ ಪುನಶ್ಚೇತನಕ್ಕೆ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದರು. 

ಈ ಹಿಂದೆ ಉಕ್ಕು ಪ್ರಾಧಿಕಾರವು ಕಾರ್ಖಾನೆಗೆ ಸಂಬಂಧಿಸಿದಂತೆ ನೀಡಿದ್ದ ವರದಿಯು ತೃಪ್ತಿದಾಯಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳಲ್ಲಿಯೇ ಉನ್ನತ ಮಟ್ಟದ ಸಮಿತಿಯ ವರದಿ ತರಿಸಿಕೊಳ್ಳಲಾಗುವುದು. ಬಳಿಕ ಬಂಡವಾಳ ಹೂಡಿಕೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಕ್ರಮ: ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಮುಂದುವರಿಸಲಾಗುವುದು ಎಂದು ಹೇಳಿದ ಅವರು, 'ಕಾರ್ಖಾನೆಗೆ ಕಚ್ಚಾವಸ್ತು ಅಗತ್ಯವಿದೆ. ಈ ಹಿಂದೆ ಕೇಂದ್ರ ಉಕ್ಕು ಸಚಿವರು ಕಾರ್ಖಾನೆಗೆ ಭೇಟಿಯಿತ್ತ ವೇಳೆಯೇ ಅಭಿವೃದ್ದಿಗೆ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ರಾಜ್ಯ ಸರ್ಕಾರ ಗಣಿ ಮಂಜೂರು ಮಾಡುವಲ್ಲಿ ವಿಳಂಬ ಮಾಡಿತು. 

ಪ್ರಸ್ತುತ ರಾಜ್ಯ ಸರ್ಕಾರ ಎರಡು ಪ್ರದೇಶದಲ್ಲಿ ಕಾರ್ಖಾನೆಗೆ ಗಣಿ ಮಂಜೂರು ಮಾಡಿದೆ. ಒಂದು ಪ್ರಕರಣ ನ್ಯಾಯಾಲಯದಲ್ಲಿದ್ದು, ಕಾರ್ಖಾನೆ ಪರವಾಗಿ ಆಗುವ ವಿಶ್ವಾಸವಿದೆ. ಈ ಎರಡು ಗಣಿಗಳು ಅದಿಕೃತವಾಗಿ ಕಾರ್ಖಾನೆಗೆ ಲಭ್ಯವಾದರೆ, ಕಚ್ಚಾವಸ್ತುವಿನ ದೊಡ್ಡ ಸಮಸ್ಯೆ ಪರಿಹಾರವಾಗಲಿದೆ' ಎಂದು ಅಭಿಪ್ರಾಯಪಟ್ಟರು. 

ಸರ್.ಎಂ.ವಿಶ್ವೇಶ್ವರಯ್ಯ ಸ್ಥಾಪಿಸಿದ ಈ ಕಾರ್ಖಾನೆಯು ದೇಶದ ಉಕ್ಕು ಕ್ಷೇತ್ರದಲ್ಲಿ ತನ್ನದೆ ಆದ ಮಹತ್ವ ಹೊಂದಿದೆ. ಇಂತಹ ಕಾರ್ಖಾನೆ ಉಳಿಸುವುದು ನಮ್ಮೆಲ್ಲದರ ಆದ್ಯ ಕರ್ತವ್ಯವಾಗಿದೆ. ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾಕ್ಕೆ ಒತ್ತು ನೀಡುತ್ತಿರುವುದರಿಂದ ವಿಐಎಸ್‍ಎಲ್ ಕಾರ್ಖಾನೆಯನ್ನು ನವೀಕರಣಗೊಳಿಸಲು ಕಟಿ ಬದ್ದವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪ, ಶಾಸಕ ಬಿ.ವೈ.ರಾಘವೇಂದ್ರ ಸೇರಿದಂತೆ ವಿಐಎಸ್‍ಎಲ್ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News