ಮಂಡ್ಯ: ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ತಡೆಯಾಜ್ಞೆ

Update: 2018-03-16 17:36 GMT

ಮಂಡ್ಯ, ಮಾ.16: ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ವಿರುದ್ಧ ಸ್ವಪಕ್ಷೀಯರು ಮಂಡಿಸಲು ಮುಂದಾಗಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.

ಮಾ.17ರಂದು ಅವಿಶ್ವಾಸ ಗೊತ್ತುವಳಿ ಮಂಡನೆಗೆ ನಗರಸಭೆ ಆಯುಕ್ತ ವಿಶೇಷ ಸಭೆ ನಿಗದಿಪಡಿಸಿದ್ದರು. ಇದರ ವಿರುದ್ಧ ಅಧ್ಯಕ್ಷ ಬೋರೇಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದರು. 

2016ರಲ್ಲಿ ಮಾರ್ಚ್‍ನಲ್ಲಿ ಒಡಂಬಡಿಕೆಯಂತೆ ಅಧ್ಯಕ್ಷ ಸ್ಥಾನದ ಗದ್ದುಗೆ ಏರಿದ್ದ ಬೋರೇಗೌಡರ ವಿರುದ್ಧ ಮೊದಲು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿತ್ತು. ಒಂದು ವರ್ಷ ಸುಮ್ಮನಿದ್ದ ಸದಸ್ಯರು ಮತ್ತೆ ಅವಿಶ್ವಾಸ ಮಂಡಿಸಲು ಮುಂದಾಗಿದ್ದರು. ಶಾಸಕ ಅಂಬರೀಶ್ ಸೇರಿದಂತೆ 23 ಸದಸ್ಯರು ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಿದ್ದರು.

ಇದೀಗ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿರುವುದರಿಂದ ಬೋರೇಗೌಡರು ಪದಚ್ಯುತದಿಂದ ತಪ್ಪಿಸಿಕೊಂಡಿದ್ದಾರೆ. ಶಾಸಕ ಅಂಬರೀಶ್ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ.

35 ಸದಸ್ಯ ಬಲದ ನಗರಸಭೆಯ ಅಧಿಕಾರ ಅವಧಿ ಕೇವಲ 6 ತಿಂಗಳಿದೆ. ಸೆ.16ಕ್ಕೆ ಅಧಿಕಾರಾವಧಿ ಮುಗಿಯಲಿದ್ದು, ಆಗಸ್ಟ್ ಅಥವಾ ಸೆಪ್ಟಂಬರ್ ನಲ್ಲಿ ನಗರಸಭೆ ಸಾರ್ವತ್ರಿಕ ಚುನಾವಣೆ ನಡೆಯುವ ಸಾಧ್ಯತೆಯಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News