ಧರ್ಮದ ಹೆಸರಿನಲ್ಲಿ ದೇಶ ವಿಭಜನೆಗೆ ಯತ್ನ: ಸಿಎಂ ಸಿದ್ದರಾಮಯ್ಯ

Update: 2018-03-17 13:21 GMT

ಹೊಸದಿಲ್ಲಿ, ಮಾ.17: ತ್ಯಾಗ ಬಲಿದಾನದಿಂದ ರಚನೆಯಾದ ಈ ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನ ಅಪಾಯದಲ್ಲಿದ್ದು, ಪ್ರಶ್ನಿಸುವವರ ಧ್ವನಿಯನ್ನು ಅಡಗಿಸಲಾಗುತ್ತಿದೆ ಎಂದು ಕೇಂದ್ರ ಸರಕಾರ ಹಾಗೂ ಸಂಘಪರಿವಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಹೊಸದಿಲ್ಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ 84ನೆ ಮಹಾ ಅಧಿವೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಮಹಾತ್ಮಗಾಂಧೀಜಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾಗಾಂಧಿಯವರ ಪ್ರೇರಣೆಯೊಂದಿಗೆ ಮತ್ತೊಂದು ಸ್ವಾತಂತ್ರ ಹೋರಾಟಕ್ಕೆ ಮುಂದಾಗಬೇಕಿದೆ. ಎಲ್ಲರೂ ಒಂದಾಗಿ ದೇಶದ ಭವಿಷ್ಯಕ್ಕಾಗಿ ರಾಹುಲ್‌ಗಾಂಧಿ ನಾಯಕತ್ವದಲ್ಲಿ ಮುಂದುವರೆಯೋಣ ಎಂದು ಕರೆ ನೀಡಿದರು.

ರಾಜೀವ್‌ಗಾಂಧಿಯವರು ಒಂದು ಕಡೆ ತಂತ್ರಜ್ಞಾನ ಮತ್ತೊಂದು ಕಡೆ ಅಧಿಕಾರ ವಿಕೇಂದ್ರೀಕರಣದ ಮೂಲಕ ಭಾರತಕ್ಕೆ ಆಧುನಿಕ ಸ್ಪರ್ಶ ನೀಡಿದರು. 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರಕಾರವು ಸೋನಿಯಾಗಾಂಧಿ ಹಾಗೂ ಡಾ.ಮನಮೋಹನ್‌ಸಿಂಗ್ ನಾಯಕತ್ವದಲ್ಲಿ 10 ವರ್ಷ ದೇಶದ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಶ್ರಮಿಸಿದೆ. ಭಾರತದ ಇತಿಹಾಸದಲ್ಲೆ ಜಿಡಿಪಿ 8.6ಕ್ಕೆ ಏರಿಕೆಯಾಗಿದ್ದು ದಾಖಲಾರ್ಹ ಎಂದು ಅವರು ಹೇಳಿದರು.

ದೇಶವು ಇಂದು ಕವಲು ದಾರಿಯಲ್ಲಿ ನಿಂತಿದೆ. ಭಾರತವು ಬಹುಸಂಸ್ಕೃತಿ ದೇಶ. ಒಂದು ಧರ್ಮ, ಭಾಷೆ, ಸಂಸ್ಕೃತಿಯನ್ನು ಅವಲಂಬಿಸಲು ಸಾಧ್ಯವಿಲ್ಲ. ಹಿಂದುತ್ವ ಶಕ್ತಿಗಳು ಫ್ಯಾಶಿಸ್ಟ್ ಸಿದ್ಧಾಂತವನ್ನು ಹೇರಲು ಪ್ರಯತ್ನಿಸುತ್ತಿವೆ. ಕಾಂಗ್ರೆಸ್ ಪಕ್ಷವು ಈ ಸವಾಲುಗಳನ್ನು ಎದುರಿಸಿ, ಅಭಿವೃದ್ಧಿಯ ವಿಚಾರಗಳ ಬಗ್ಗೆ ಗಮನ ಹರಿಸಬೇಕಿದೆ ಎಂದು ಅವರು ಕರೆ ನೀಡಿದರು.

ಪ್ರಧಾನಿ ನರೇಂದ್ರಮೋದಿ ಎನ್‌ಡಿಎ ಸರಕಾರವನ್ನು ಇವೆಂಟ್ ಮ್ಯಾನೇಜ್‌ಮೆಂಟ್ ಹಾಗೂ ಪಬ್ಲಿಕ್ ರಿಲೇಷನ್ಸ್ ರೀತಿಯಲ್ಲಿ ನಡೆಸುತ್ತಿದ್ದಾರೆ. ಯುವಕರು, ರೈತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ನೈಜ ವಿಷಯಗಳು ಜಾಹೀರಾತುಗಳ ಭರಾಟೆಯಲ್ಲಿ ಮರೆಮಾಚಲ್ಪಡುತ್ತಿವೆ ಎಂದು ಅವರು ಹೇಳಿದರು.

ಸಂಕಷ್ಟದ ಸಂದರ್ಭದಲ್ಲಿ ಪಕ್ಷದ ನಾಯಕತ್ವವನ್ನು ವಹಿಸಿಕೊಂಡಿರುವ ರಾಹುಲ್‌ಗಾಂಧಿ ಯುವಕರು, ಉದಾರವಾದಿ, ಕ್ರಿಯಾಶೀಲ ಹಾಗೂ ಪ್ರಜಾಪ್ರಭುತ್ವ ವಾದಿಯಾಗಿದ್ದಾರೆ. ಕೆಲವು ನಾಯಕರಂತೆ ‘ಮನ್ ಕಿ ಬಾತ್’ ಹೇಳುವುದಿಲ್ಲ. ಅದರ ಬದಲು, ರೈತರು, ಯುವಕರು ಹಾಗೂ ಅಶಕ್ತರ ಧ್ವನಿಯನ್ನು ಕೇಳುತ್ತಾರೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಅನ್ನಭಾಗ್ಯ ಯೋಜನೆ ಅನ್ವಯ ಪ್ರತಿಯೊಬ್ಬ ವ್ಯಕ್ತಿಗೆ ತಲಾ 7 ಕೆ.ಜಿ.ಆಹಾರ ಧಾನ್ಯ ನೀಡಲಾಗುತ್ತಿದೆ. ಪ್ರತಿ ತಿಂಗಳು ನಾಲ್ಕು ಕೋಟಿ ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ ಶೇ.90ರಷ್ಟನ್ನು ಪೂರೈಸಿದ್ದೇವೆ ಎಂದು ಅವರು ಹೇಳಿದರು.

ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ.ಹಾಕುವುದು ಅಥವಾ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂಬ ಸುಳ್ಳು ಆಶ್ವಾಸನೆಗಳನ್ನು ನೀಡುವುದಿಲ್ಲ. 165 ಭರವಸೆಗಳ ಪೈಕಿ 158 ಅನ್ನು ಈಡೇರಿಸಿದ್ದೇವೆ. ಅದಷ್ಟೇ ಅಲ್ಲ, ಪ್ರಣಾಳಿಕೆಯಲ್ಲಿ ಇಲ್ಲದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ನಗರ ಪ್ರದೇಶದ ಬಡ ಜನರ ಹಸಿವು ನೀಗಿಸಲು 400 ಇಂದಿರಾ ಕ್ಯಾಂಟೀನ್, ರೈತರ ಸಾಲ ಮನ್ನಾ, ಸುಮಾರು 10 ಲಕ್ಷ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡುವ ಮಾತೃಪೂರ್ಣ, ಒಣ ಭೂಮಿಯನ್ನು ಹೊಂದಿರುವ 70 ಲಕ್ಷ ರೈತರಿಗೆ ಸಹಕಾರಿಯಾಗುವ ‘ರೈತ ಬೆಳಕು’ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಮಾತೃಪೂರ್ಣ, ವಿದ್ಯಾಸಿರಿ, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಅನಿಲ ಭಾಗ್ಯ, ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಿದ್ದೇವೆ. ರಾಜ್ಯದಲ್ಲಿ ಯಾರೊಬ್ಬರು ಹಸಿವಿನಿಂದ ಮಲಗಬಾರದು ಎಂಬ ಸಂಕಲ್ಪ ತೊಟ್ಟು ಕೆಲಸ ಮಾಡಿದ್ದೇವೆ. ಹಸಿವಿನ ವಿರುದ್ಧ ಹೋರಾಟದಲ್ಲಿ ಜಯ ಸಾಧಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕವು ಬಂಡವಾಳ ಆಕರ್ಷಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ರೇಶ್ಮೆಯಿಂದ ಸಿಲಿಕಾನ್ ಸಿಟಿಯವರೆಗೆ ನಮ್ಮ ಪಯಣ. ಐಟಿಬಿಟಿಯ ರಾಜಧಾನಿಯಾಗಿರುವುದರ ಜೊತೆಗೆ ನವೋದ್ಯಮಗಳಿಗೆ ಪ್ರಶಸ್ತ ತಾಣವಾಗಿದೆ. ಎಸ್ಸಿ-ಎಸ್ಟಿಗೆ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸಲು ಎಸ್ಸಿಪಿ-ಟಿಎಸ್ಪಿ ಕಾಯ್ದೆ, ವಾಸಿಸುವವನೆ ಮನೆಯೊಡೆಯ, ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರತ್ಯೇಕ ನೀತಿಯನ್ನು ಜಾರಿಗೆ ತಂದಿದ್ದೇವೆ.

ಕಳೆದ ಐದು ವರ್ಷಗಳಲ್ಲಿ ರಾಜ್ಯದ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಹೊಸ ಮಾದರಿಯನ್ನು ತಂದಿದ್ದು, ಪ್ರತಿಯೊಬ್ಬರನ್ನೂ ಒಳಗೊಳ್ಳುವ ‘ಕರ್ನಾಟಕ ಮಾದರಿ ಅಭಿವೃದ್ಧಿ’ ನಮ್ಮದು. ಬೇರೆಯವರು ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎನ್ನುತ್ತಾರೆ. ಆದರೆ, ನಾವು ಕರ್ನಾಟಕದಲ್ಲಿ ಅದನ್ನು ಅನುಷ್ಠಾನಕ್ಕೆ ತಂದಿದ್ದೇವೆ.

ಬಸವಣ್ಣನವರು ನುಡಿದಂತೆ ‘ಕಾಯಕವೇ ಕೈಲಾಸ’ದಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದೇವೆ. ಇದಲ್ಲದೆ, ಮಹಾತ್ಮಗಾಂಧೀಜಿಯವರ ಗ್ರಾಮ ಸ್ವರಾಜ್, ಅಂಬೇಡ್ಕರ್ ಅವರ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವು ರಾಜಕೀಯ ಹಿನ್ನಡೆಯನ್ನು ಅನುಭವಿಸುತ್ತಿದೆ. ಆದರೆ ನಾವು ಎದೆಗುಂದುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷ ಇಂತಹ ಅನೇಕ ಹಿನ್ನಡೆಗಳನ್ನು ಎದುರಿಸಿ ಮತ್ತೆ ಪ್ರಬಲವಾಗಿ ಬೆಳೆದಿರುವ ಇತಿಹಾಸ ನಮ್ಮ ಮುಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಬಡವರಿಗೆ ಅವಕಾಶ ಕಲ್ಪಿಸಲು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು. ಆದರೆ, ಇವತ್ತು ಕೇಂದ್ರ ಸರಕಾರವು ಅಪನಗದೀಕರಣ ಮಾಡುವ ಮೂಲಕ ಬಡವರನ್ನು ಬ್ಯಾಂಕುಗಳಿಂದ ದೂರ ಸರಿಯುವಂತೆ ಮಾಡಿದೆ. ಕೇಂದ್ರ ಸರಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಬ್ಯಾಂಕುಗಳನ್ನು ಲೂಟಿ ಹೊಡೆದು ಸುರಕ್ಷಿತವಾಗಿ ಹೊರದೇಶಗಳಿಗೆ ಪರಾರಿಯಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News