ದಿನಕರನ್ ಪಕ್ಷದ ಧ್ವಜದ ಬಣ್ಣದ ವಿರುದ್ಧ ಹೈಕೋರ್ಟ್‌ಗೆ ಎಐಎಡಿಎಂಕೆ ಮೊರೆ

Update: 2018-03-17 13:40 GMT

ಚೆನ್ನೈ,ಮಾ.17: ಉಪೇಕ್ಷಿತ ನಾಯಕ ಟಿಟಿವಿ ದಿನಕರನ್ ಅವರು ತನ್ನ ನೂತನ ಪಕ್ಷದ ಧ್ವಜ ಅಥವಾ ಇತರ ಯಾವುದೇ ಸಾಮಗ್ರಿಯಲ್ಲಿ ತನ್ನ ಧ್ವಜವನ್ನೇ ಹೋಲುವ ಬಣ್ಣಗಳನ್ನು ಬಳಸುವುದನ್ನು ಶಾಶ್ವತವಾಗಿ ನಿರ್ಬಂಧಿಸುವಂತೆ ಕೋರಿ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆಯು ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲ ನ್ನೇರಿದೆ.

ಎಐಎಡಿಎಂಕೆಯ ಜಂಟಿ ಸಂಚಾಲಕರೂ ಆಗಿರುವ ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಅವರು ಶುಕ್ರವಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಶನಿವಾರದಿಂದ ಆರಂಭಗೊಂಡಿದೆ.

ಶುಕ್ರವಾರ ತನ್ನ ‘ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ’ ನೂತನ ಪಕ್ಷಕ್ಕೆ ಚಾಲನೆ ನೀಡಿದ್ದ ದಿನಕರನ್ ಅವರು ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದರು. ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಚಿತ್ರವಿರುವ ಧ್ವಜವು ಮೇಲ್ಭಾಗದಲ್ಲಿ ಕಪ್ಪು, ಕೆಳಭಾಗದಲ್ಲಿ ಕೆಂಪು ಮತ್ತು ಮಧ್ಯದಲ್ಲಿ ಬಿಳಿಯ ಬಣ್ಣಗಳನ್ನು ಹೊಂದಿದೆ. ಎಐಎಡಿಎಂಕೆ ಪಕ್ಷದ ಧ್ವಜವು ಮಧ್ಯದಲ್ಲಿ ಬಿಳಿಯ ಬಣ್ಣದ ಮೇಲೆ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ಅವರ ಚಿತ್ರದೊಂದಿಗೆ ಮೇಲಿನ ಅರ್ಧ ಭಾಗದಲ್ಲಿ ಕಪ್ಪು ಮತ್ತು ಕೆಳಗಿನ ಅರ್ಧಭಾಗದಲ್ಲಿ ಕೆಂಪು ಬಣ್ಣಗಳನ್ನು ಹೊಂದಿದೆ. ದಿನಕರನ್ ಅವರ ಪಕ್ಷದ ಧ್ವಜವು ತನ್ನ ಪಕ್ಷದ ಧ್ವಜವನ್ನೇ ಹೋಲುತ್ತಿದ್ದು, ಎಐಎಡಿಎಂಕೆಯ ವಿಶಿಷ್ಟ ಕಪ್ಪು, ಕೆಂಪು ಮತ್ತು ಬಿಳಿಯ ಬಣ್ಣಗಳನ್ನು ನೂತನ ಪಕ್ಷದ ಧ್ವಜದಲ್ಲಿ ಅಥವಾ ಇತರ ಸಾಮಗ್ರಿಯಲ್ಲಿ ಬಳಸಲು ಅವರಿಗೆ ಅನುಮತಿ ನೀಡಿದರೆ ಅದು ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸುತ್ತದೆ ಎಂದು ಕೆ.ಪಳನಿಸ್ವಾಮಿ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.

  ದಿನಕರನ್ ಅವರಿಂದ 25 ಲ.ರೂ.ಗಳ ನಷ್ಟ ಪರಿಹಾರವನ್ನೂ ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News