ಮೋದಿ ಸರಕಾರದ ಅಕ್ರಮಗಳನ್ನು ಬಯಲು ಮಾಡುತ್ತೇವೆ : ಸೋನಿಯಾ ಘೋಷಣೆ

Update: 2018-03-17 16:03 GMT

ಹೊಸದಿಲ್ಲಿ, ಮಾ.17: ಚುನಾವಣಾ ಪೂರ್ವದಲ್ಲಿ ವಿಸ್ತೃತ ಅಭಿವೃದ್ಧಿ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂಬ ಘೋಷಣೆಯೊಂದಿಗೆ ಜನರಿಗೆ ಮಂಕುಬೂದಿ ಎರಚಿ ಅಧಿಕಾರ ಪಡೆದ ಪ್ರಧಾನಿ ನರೇಂದ್ರ ಮೋದಿಯವರದ್ದು ಘೋಷಣೆಗೆ ಮಾತ್ರ ಸೀಮಿತವಾದ ಪೊಳ್ಳು ಭರವಸೆಯಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದ್ದಾರೆ. ಈ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತದಲ್ಲಿ ದೇಶದ ಅರ್ಥವ್ಯವಸ್ಥೆ ವಿಕಸಿತವಾಗಿತ್ತು. ನಮ್ಮ ಸರಕಾರ ರೂಪಿಸಿದ ನೀತಿಗಳು ಮಿಲಿಯಾಂತರ ಜನರನ್ನು ಬಡತನದಿಂದ ಮೇಲೆತ್ತಿತು. ಆದರೆ ಈಗಿನ ಮೋದಿ ಸರಕಾರ ಈ ನೀತಿಯನ್ನು ಬಲಗುಂದಿಸುತ್ತಿದೆ. ಮೋದಿ ಸರಕಾರ ನಡೆಸಿದ ಅಕ್ರಮವನ್ನು ಪುರಾವೆ ಸಹಿತ ಕಾಂಗ್ರೆಸ್ ಬಯಲು ಮಾಡಲಿದೆ ಎಂದರು.

ಇಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ 84ನೇ ಪೂರ್ಣಾಧಿವೇಶನದಲ್ಲಿ ಮಾತನಾಡಿದ ಸೋನಿಯಾ, ದೇಶವನ್ನು ದುರಹಂಕಾರ ತಾರತಮ್ಯ ಹಾಗೂ ದ್ವೇಷದ ರಾಜಕಾರಣ ವ್ಯವಸ್ಥೆಯಿಂದ ಮುಕ್ತಗೊಳಿಸಲು ಮತ್ತು ಪಕ್ಷವನ್ನು ಬಲಪಡಿಸಲು ಯಾವುದೇ ತ್ಯಾಗಕ್ಕೆ ಸಿದ್ಧರಾಗಿರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಕಾಂಗ್ರೆಸ್ ಪಕ್ಷವನ್ನು ದೇಶದಿಂದ ಹೊರಗೆಸೆಯುತ್ತೇವೆ ಎಂದು ಅಧಿಕಾರದ ಅಮಲಿನಿಂದ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಕೇವಲ ಒಂದು ಅಸ್ತಿತ್ವವಲ್ಲ. ಅದೊಂದು ಆಂದೋಲನ. ದೇಶದ ಜನರಿಂದ ಮಾನ್ಯತೆ ಪಡೆದ ಪಕ್ಷವಿದು. ಇಂತಹ ಪಕ್ಷವನ್ನೇ ನಾಶ ಮಾಡಲು ಹೊರಟವರಿಗೆ ದೇಶದ ಜನತೆ ಮಧ್ಯಪ್ರದೇಶ, ಗುಜರಾತ್ ಮತ್ತು ಉತ್ತರಪ್ರದೇಶದ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ ಎಂದು ಸೋನಿಯಾ ಹೇಳಿದರು.

‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’, ‘ನಾ ಕಾವೂಂಗ, ನಾ ಖಾನೆ ಧೂಂಗ’ ಇವೆಲ್ಲಾ ಕೇವಲ ನಾಟಕದ ಮಾತುಗಳು ಮತ್ತು ಅಧಿಕಾರ ಪಡೆಯಲು ನಡೆಸಿದ ಕುತಂತ್ರವಾಗಿದೆ. ಬಿಜೆಪಿ 2014ರಲ್ಲಿ ನೀಡಿದ್ದ ಭರವಸೆ ಪೊಳ್ಳು ಎಂಬುದು ಈಗ ಜನತೆಗೆ ಅರ್ಥವಾಗುತ್ತಿದೆ .ಯಾವುದೇ ರೀತಿಯಿಂದಾದರೂ ಅಧಿಕಾರ ಪಡೆಯಬೇಕು ಎಂಬುದು ಬಿಜೆಪಿಯ ಧೋರಣೆಯಾಗಿದೆ. ಆದರೆ ದುರಹಂಕಾರದ ಮತ್ತು ದ್ವೇಷ ರಾಜಕಾರಣಕ್ಕೆ ಕಾಂಗ್ರೆಸ್ ಎಂದಿಗೂ ತಲೆಬಾಗದು. ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವುದು ಕಾಂಗ್ರೆಸ್‌ನ ಧೋರಣೆಯಾಗಿದೆ. ಸಮಾನಮನಸ್ಕ ಪಕ್ಷಗಳ ಜೊತೆ ಸೇರಿಕೊಂಡು ಬಿಜೆಪಿಯನ್ನು ಕಿತ್ತೆಸೆಯಲು ಕಾಂಗ್ರೆಸ್ ಪ್ರಯತ್ನ ಮುಂದುವರಿಸಲಿದೆ ಎಂದು ಸೋನಿಯಾ ಹೇಳಿದರು. ಅಲ್ಲದೆ ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸರ್ವ ಸಹಕಾರ ನೀಡುವಂತೆ ಪಕ್ಷೀಯರಿಗೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News