ಪ್ರತಿದಿನ ಬೆಳಗ್ಗೆ 10:50ಕ್ಕೆ ಸಂಪೂರ್ಣ ಸ್ತಬ್ಧವಾಗುತ್ತೆ ಈ ಗ್ರಾಮ!

Update: 2018-03-17 16:47 GMT
ಸಾಂದರ್ಭಿಕ ಚಿತ್ರ

ಅಭಯ್‌ನಗರ್, ಮಾ.17: ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲಬೇಕೇ, ಬೇಡವೇ ಎಂಬ ಬಗ್ಗೆಯೇ ನಮ್ಮ ದೇಶದಲ್ಲಿ ಚರ್ಚೆಗಳು ನಡೆಯುತ್ತಿರಬೇಕಾದರೆ ಪಶ್ಚಿಮ ಬಂಗಾಳದ ಒಂದು ಗ್ರಾಮದಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೂಡಾ ಪ್ರತಿದಿನ ಬೆಳಿಗ್ಗೆ ರಾಷ್ಟ್ರಗೀತೆಗೆ ಎದ್ದು ನಿಲ್ಲುವ ಪರಿಪಾಠವನ್ನು ಬೆಳೆಸಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿರುವ ಅಭಯ್‌ನಗರ್ ಗ್ರಾಮದ ಪ್ರತಿಯೊಬ್ಬ ವ್ಯಕ್ತಿ ಕೂಡಾ ಸಮೀಪದ ಪ್ರಾಥಮಿಕ ಶಾಲೆಯಲ್ಲಿ ಪ್ರತಿದಿನ ಬೆಳಿಗ್ಗೆ 10.50ರ ಹೊತ್ತಿಗೆ ಹಾಡುವ ರಾಷ್ಟ್ರಗೀತೆಗೆ 52 ಸೆಕೆಂಡ್‌ಗಳ ಕಾಲ ನಿಂತಲ್ಲಿಯೇ ನಿಂತು ಗೌರವ ತೋರಿಸುತ್ತಾರೆ. ಈ ಗ್ರಾಮದಲ್ಲಿ ಇದೊಂದು ಸಂಪ್ರದಾಯವಾಗಿ ಬೆಳೆದಿದ್ದು, ಮನೆಯಲ್ಲಿರುವವರು, ವಾಹನಗಳಲ್ಲಿ ಹೋಗುವವರು ಮತ್ತು ಪಾದಚಾರಿಗಳು ತಾವು ಇರುವಲ್ಲಿಯೇ ನಿಶ್ಚಲವಾಗಿ ನಿಂತು ರಾಷ್ಟ್ರಗೀತೆಯನ್ನು ಹಾಡುತ್ತಾರೆ ಎಂದು ಮಾಧ್ಯಮ ವರದಿ ಮಾಡಿದೆ. ಈ ಕುರಿತು ಮಾತನಾಡಿರುವ ಶಾಲೆಯ ಮುಖ್ಯೋಪಾಧ್ಯಾಯರಾದ ಶಫೀಕುಲ್ ಇಸ್ಲಾಂ, ಈ ರೀತಿ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಮತ್ತು ಜನರಲ್ಲಿ ದೇಶಭಕ್ತಿಯನ್ನು ಬೆಳೆಸಲು ಸಾಧ್ಯ ಎಂದು ನಂಬಿದ್ದೆವು. ಶಾಲೆಯಲ್ಲಿ ಮಕ್ಕಳು ರಾಷ್ಟ್ರಗೀತೆ ಹಾಡುವಾಗ ಊರಿನ ಜನರು ಕೂಡಾ ತಾವಿರುವಲ್ಲೇ ನಿಂತು ಮಕ್ಕಳ ಜೊತೆ ರಾಷ್ಟ್ರಗೀತೆ ಹಾಡುವಂತೆ ನಾವು ಮನವಿ ಮಾಡಿದ್ದೆವು. ಅದಕ್ಕೆ ಗ್ರಾಮದ ಜನರು ಒಪ್ಪಿಕೊಂಡರು ಮತ್ತು ಇದೊಂದು ಸಂಪ್ರದಾಯವಾಗಿ ಬೆಳೆಯಿತು ಎಂದು ತಿಳಿಸಿದ್ದಾರೆ. ಶಾಲೆಯ ಕಟ್ಟಡದಿಂದ ನೂರು ಅಡಿ ಅಂತರದಲ್ಲಿ ಧ್ವನಿವರ್ಧಕವನ್ನು ಅಳವಡಿಸಲಾಗಿದ್ದು ಅದರಲ್ಲಿ ರಾಷ್ಟ್ರಗೀತೆಯನ್ನು ಕೇಳಿದ ತಕ್ಷಣ ಜನರು ತಾವು ಕೂಡಾ ಅದಕ್ಕೆ ಧ್ವನಿಗೂಡಿಸುತ್ತಾರೆ ಎಂದು ಇಸ್ಲಾಂ ತಿಳಿಸಿದ್ದಾರೆ. ಶಾಲೆಯ ಈ ಪರಿಪಾಠದಿಂದ ಗ್ರಾಮದ ಜನರು ಕೂಡಾ ಸಂತುಷ್ಟರಾಗಿದ್ದಾರೆ. ನಾನು ಮತ್ತು ಇತರ ಇಬ್ಬರು ತಲೆಯಲ್ಲಿ ಹುಲ್ಲನ್ನು ಎತ್ತಿಕೊಂಡು ಸಾಗುತ್ತಿದ್ದೆವು. ಆಗ ಶಾಲೆಯಿಂದ ರಾಷ್ಟ್ರಗೀತೆಯ ಧ್ವನಿ ಕೇಳಿಸಿತು. ಕೂಡಲೇ ಹುಲ್ಲು ನೆಲದ ಮೇಲೆ ಹಾಕಿ ಕೆಲವು ಸೆಕೆಂಡ್‌ಗಳ ಕಾಲ ನಿಂತು ನಾವು ಕೂಡಾ ರಾಷ್ಟ್ರಗೀತೆ ಹಾಡಿದೆವು ಎಂದು ಹೇಳುತ್ತಾರೆ 50ರ ಹರೆಯದ ರೈತ ಮೈಜುದ್ದೀನ್ ಬಿಸ್ವಾಸ್.

26ರ ಹರೆಯದ ಚಂಪಾ ಬೀಬಿ ತನ್ನ ಇಬ್ಬರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ನಂತರ ರಾಷ್ಟ್ರಗೀತೆ ಮುಗಿದ ನಂತರವೇ ಮನೆಗೆ ಮರಳುತ್ತಾರೆ. ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ನರ್ಸಿನ ಬೀಬಿ ರಾಷ್ಟ್ರಗೀತೆ ಆರಂಭವಾದ ತಕ್ಷಣ ತಾವೂ ಕೆಲಸ ನಿಲ್ಲಿಸಿ ಜನಗಣಮನ ಹಾಡಲು ಆರಂಭಿಸುತ್ತಾರೆ ಎಂದು ವರದಿ ತಿಳಿಸುತ್ತದೆ. ಈ ಶಾಲೆಯಲ್ಲಿ 115 ಮಕ್ಕಳಿದ್ದು ಅವರಲ್ಲಿ ಬಹುತೇಕರು ಬಡಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಶಾಲೆಯು 2016ರಲ್ಲಿ ಶಿಶುಮಿತ್ರಾ ವಿದ್ಯಾಲಯ ಪ್ರಶಸ್ತಿ ಹಾಗೂ 2012ರಲ್ಲಿ ನಿರ್ಮಲ ವಿದ್ಯಾಲಯ ಪ್ರಶಸ್ತಿ ಸೇರಿದಂತೆ ಹಲವು ಸರಕಾರಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News