ಸಲ್ಮಾನ್ ಖಾನ್‌ ಜೊತೆ ನಟಿಸಿದ್ದ ಈ ನಟಿಗೆ ಒಂದು ಕಪ್ ಚಹಾಕ್ಕೂ ಹಣವಿಲ್ಲ !

Update: 2018-03-19 13:57 GMT

ಮುಂಬೈ, ಮಾ. 19: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ವೀರಗತಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಪೂಜಾ ದಡ್ವಾಲ್ ಈಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ವೈದ್ಯಕೀಯ ಚಿಕಿತ್ಸೆಯ ವೆಚ್ಚ ಭರಿಸಲು ಅಸಹಾಯಕರಾಗಿದ್ದಾರೆ. ಬಾಂಬೆ ಟೈಮ್ಸ್‌ನೊಂದಿಗೆ ಮಾತನಾಡಿರುವ ಅವರು, ತಾನು ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದೆ. ಆದರೆ, ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಪೂಜಾ ದಡ್ವಾಲ್ ಕ್ಷಯರೋಗ ಹಾಗೂ ಶ್ವಾಸಕೋಶ ಸಂಬಂಧಿಸಿದ ಅನಾರೋಗ್ಯಕ್ಕೆ ತುತ್ತಾಗಿ ಮುಂಬೈಯ ಶಿವ್ಡಿ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ‘‘ಕ್ಷಯರೋಗದಿಂದ ತನ್ನ ಆರೋಗ್ಯ ತೀವ್ರ ಹದಗೆಟ್ಟಿದೆ ಎಂದು ನನಗೆ ಆರು ತಿಂಗಳ ಹಿಂದೆ ಗೊತ್ತಾಯಿತು. ನಾನು ನೆರವಿಗಾಗಿ ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಅದು ಸಾಧ್ಯವಾಗಲಿಲ್ಲ. ಅವರು ನನ್ನ ವೀಡಿಯೊ ನೋಡಿ ನನಗೆ ನೆರವು ನೀಡಬಹುದು. ನಾನು ಕಳೆದ ಮೂರು ವರ್ಷಗಳಿಂದ ಗೋವಾದ ಕ್ಯಾಸಿನೊ ನಿರ್ವಹಿಸುವ ಕೆಲಸ ಮಾಡುತ್ತಿದ್ದೆ. ನನ್ನಲ್ಲಿ ಹಣವಿಲ್ಲ. ಒಂದು ಕಪ್ ಚಹಾಕ್ಕೂ ಇತರರನ್ನು ಅವಲಂಬಿಸಬೇಕಾಗಿದೆ’’ ಎಂದು ಅವರು ಹೇಳಿದ್ದಾರೆ. ಪೂಜಾ ಅನಾರೋಗ್ಯಕ್ಕೀಡಾದ ಬಳಿಕ ಅವರ ಪತಿ ಹಾಗೂ ಕುಟುಂಬದ ಸದಸ್ಯರು ದೂರವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೂಜಾ ಹಿಂದೂಸ್ತಾನ್, ಸಿಂಧೂರ ಸುಗಂಧ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News