ವಿಜ್ಞಾನದಲ್ಲಿನ ಒಳ್ಳೆಯ ಗುಣಗಳನ್ನು ಆರಿಸಿಕೊಳ್ಳಬೇಕು: ವಿಜ್ಞಾನಿ ಸಿ.ಆರ್.ಸತ್ಯ

Update: 2018-03-19 16:43 GMT

ಮೈಸೂರು,ಮಾ.19: ವಿಜ್ಞಾನ ಇಂದು ನಾಗಾಲೋಟದಲ್ಲಿ ಓಡುತ್ತಿದ್ದು, ಅದು ಸರಿಯಲ್ಲ. ಏಕೆಂದರೆ ಅದರಿಂದ ಕೆಡುಕೇ ಹೆಚ್ಚು ಎಂಬುದು ಕೆಲವರ ವಾದ. ಆದರೆ ಅದಕ್ಕೆ ಕಡಿವಾಣ ಹಾಕುವುದು ಸರಿಯಲ್ಲ. ಎಲ್ಲದಕ್ಕೂ ಒಳ್ಳೆಯ ಮತ್ತು ಕೆಟ್ಟ ಮುಖಗಳಿರುವಂತೆ ವಿಜ್ಞಾನಕ್ಕೂಇದೆ. ಅದರಲ್ಲಿನ ಒಳ್ಳೆಯ ಗುಣಗಳನ್ನು  ಆರಿಸಿಕೊಳ್ಳಬೇಕು ಎಂದು ಇಸ್ರೋನ ವಿಶ್ರಾಂತ ವಿಜ್ಞಾನಿ ಸಿ.ಆರ್.ಸತ್ಯ ಅಭಿಪ್ರಾಯಪಟ್ಟರು.

ನಿನ್ನೆ ಮೈಸೂರ್ ಸೈನ್ಸ್ ಫೌಂಡೇಷನ್ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ 60ನೇ ತಿಂಗಳ ವಿಜ್ಞಾನ ಉಪನ್ಯಾಸ ಮಾಲಿಕೆಯಲ್ಲಿ ‘ಭವಿಷ್ಯದಲ್ಲಿ ಮಾನವ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. 

ಮನುಷ್ಯ ಭೂಮಿಯ ಮೇಲೆ ಉಗಮವಾಗಿ ಎಂದು ಬೆಂಕಿಯನ್ನುಕಂಡು ಹಿಡಿದನೋ ಅಲ್ಲಿಂದಲೇ ಅವನಿಗೆ ಸಂಶೋಧನಾ ಪ್ರವೃತ್ತಿ ಬೆಳೆದಿದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಈ ಸಂಶೋಧನಾ ಮನೋಭಾವವೇ ವಿಜ್ಞಾನದ ಬೆಳವಣಿಗೆಗೆ ಸಾಧ್ಯವಾಗಿ ಇಂದು ಅದರ ವೇಗ ಹೇಗಿದೆಯೆಂದರೆ ಯಾರಿಂದಲೂ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಬೆಂಕಿಯ ನಂತರ, ಮನೆ ನಿರ್ಮಾಣ, ಚಕ್ರದ ಆವಿಷ್ಕಾರ, ವಾಹನಗಳು, ಭಾಷೆಗಳ ಉಗಮ, ನಾಗರೀಕತೆ, ವಿದ್ಯುತ್, ರೇಡಿಯೋ, ಟಿ.ವಿ ಹೀಗೆ ಒಂದರ ಹಿಂದೆ ಒಂದು ನಿಧಾನಗತಿಯಲ್ಲಿ ವಿಜ್ಞಾನ ಬೆಳೆಯುತ್ತಾ ಬಂತು. ಆದರೆ ಇಂದು ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಇಂದು ಖರೀದಿಸುವ ಎಲೆಕ್ಟ್ರಾನಿಕ್ ಉಪಕರಣಗಳು ನಾಳೆಗೆ ಹಳೆಯ ತಂತ್ರಜ್ಞಾನದ ವಸ್ತುಗಳಾಗಿ ಬಿಡುತ್ತಿವೆ. ತಂತ್ರಜ್ಞಾನದ ಬೆಳವಣಿಗೆ ಮನುಕುಲದ ಒಳಿತಿಗಾಗೇ ಮಾಡಲಾಯಿತು. ರೇಡಿಯೋ, ಟಿ.ವಿ ಮತ್ತು ಅಂತರ್ಜಾಲಗಳಿಂದಾಗಿ ವಿಶ್ವದಲ್ಲಿನ ಮಾಹಿತಿಗಳನ್ನು ಮನೆಯಲ್ಲೇ ಕುಳಿತು ಪಡೆದುಕೊಳ್ಳುವಂತಾಯಿತು. ಮಿಕ್ಸಿ, ವಾಷಿಂಗ್ ಮೆಷಿನ್, ಪ್ರಿಡ್ಜ್, ಫ್ಯಾನ್ ಗಳು ಮನೆಯಲ್ಲಿನ ಕೆಲಸಗಳನ್ನು ಕಡಿಮೆಮಾಡಿದವು. ಕೈಗಾರಿಕಾ ಯಂತ್ರಗಳ ಆವಿಷ್ಕಾರ ಅನೇಕ ಉತ್ಪಾದನೆಗಳನ್ನು ಸುಲಭವಾಗಿ ಮಾಡಲು ನೆರವಾದವು. ಹೀಗೆ ತಂತ್ರಜ್ಞಾನ ಮನುಷ್ಯನ ಕೆಲಸ ಕಡಿಮೆ ಮಾಡುವುದಲ್ಲದೇ, ವೇಗವಾಗಿ ಮಾಡಲು ಸಹಕರಿಸಿತು ಮತ್ತು ಹೊಸ ಹೊಸ ಯಂತ್ರಗಳನ್ನು ಕೊಡುಗೆಯಾಗಿ ನೀಡಿತು ಎಂದು ಹೇಳಿದರು.

ತಂತ್ರಜ್ಞಾನ ಬೆಳೆಯಿತು ಹತ್ತುಜನ ಮಾಡುವ ಕೆಲಸವನ್ನು ಒಂದೇ ಯಂತ್ರ ಮಾಡಿತು, ಮನುಷ್ಯನ ಕೆಲಸ ಕಸಿದುಕೊಂಡಿತು. ಈಗಂತೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿ ತಯಾರಿಸಿದ ರೋಬಾಟ್ ಗಳು ಮನುಷ್ಯ ಮಾಡುವ ಎಲ್ಲಾ ಕೆಲಸವನ್ನು ಮಾಡುತ್ತಿವೆ. ಈಗಾಗಲೇ ಅಮೇರಿಕಾ, ಚೈನಾ ದಂತಹ ರಾಷ್ಟ್ರಗಳಲ್ಲಿ ಕಾರು, ಸ್ಕೂಟರ್ ಗಳ ತಯಾರಿಕೆಗೂ ಕೂಡ ರೋಬಾಟ್ ಗಳನ್ನು ಬಳಸಲಾಗುತ್ತಿದೆ. ಈ ರೀತಿಯಾಗಿ ವೈದ್ಯಕೀಯ, ರಕ್ಷಣಾ, ಕಾರ್ಖಾನೆ ಮತ್ತು ಸಂಶೋಧನಾ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ಇಂದು ರೋಬಾಟ್ ಗಳು ಕೆಲಸ ನಿರ್ವಹಿಸುತ್ತಿವೆ. ಇದೇ ಕಾರಣಕ್ಕೆ ಮುಂದೊಂದು ದಿನ ಮನುಷ್ಯನ ದೊಡ್ಡ ವೈರಿಯಾಗಿ ಯಂತ್ರಗಳು ನಿಂತರೆ ಆಶ್ಚರ್ಯವಿಲ್ಲ ಎಂದರು.

ತಂತ್ರಜ್ಞಾನ ಮನುಷ್ಯನನ್ನು ಭೂಮಿಯಿಂದ ಆಚೆ ನೋಡುವಂತೆ ಮಾಡಿದೆ. ಈಗಾಗಲೇ ಭೂಮಿಯನ್ನು ಹಾಳುಮಾಡಿರುವ ಮಾನವ ಮಂಗಳನಲ್ಲಿ ಮನೆ ಮಾಡಲು ಹೊರಟಿದ್ದಾನೆ. ನಾಸ ಈಗಾಗಲೇ ಮಂಗಳನಲ್ಲಿ ರೋವರ್ ಇಳಿಸಿ ಸಂಶೋಧನೆ ನಡೆಸಿದೆ ಮತ್ತು 2020 ಕ್ಕೆ ಮಾನವನನ್ನು ಕಳುಹಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಭಾರತವೂ ಮಂಗಳನ ಅಧ್ಯಯನಕ್ಕಾಗಿ ಮಾಮ್ ಉಪಗ್ರಹ ಉಡಾವಣೆ ಮಾಡಿದೆ. ಇರುವ ಸುಂದರ ಭೂಮಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇನ್ನೊಂದು ಗ್ರಹದತ್ತ ಓಡುತ್ತಿರುವುದು ವಿಪರ್ಯಾಸವೇ ಸರಿ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News