ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗುಜರಾತ್ ಹಿಂದೆ: ನೀತಿ ಆಯೋಗ

Update: 2018-03-19 16:45 GMT
ರಾಜೀವ ಕುಮಾರ್

ಗಾಂಧಿನಗರ,ಮಾ.19: ಗುಜರಾತ್ ಕೈಗಾರೀಕರಣದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದೆಯಾದರೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹಿಂದುಳಿದಿದೆ ಎಂದು ನೀತಿ ಆಯೋಗವು ಹೇಳಿದೆ.

ಸೋಮವಾರ ಇಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಹಿರಿಯ ಸರಕಾರಿ ಅಧಿಕಾರಿಗಳೊಂದಿಗೆ ಸಭೆಯ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಆಯೋಗದ ಉಪಾಧ್ಯಕ್ಷ ರಾಜೀವ ಕುಮಾರ್ ಅವರು, ಕೈಗಾರೀಕರಣ, ಮೂಲಸೌಕರ್ಯ ಮತ್ತು ಶಕ್ತಿ ಕ್ಷೇತ್ರಗಳಲ್ಲಿನ ಸಾಧನೆಗಳಿಗೆ ಹೋಲಿಸಿದರೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಗುಜರಾತ್ ಹಿಂದುಳಿದಿದೆ. ಈ ಕುರಿತು ತಾನು ರಾಜ್ಯ ಸರಕಾರ ದೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.

ಸರಕಾರವು 2018-19ನೇ ಸಾಲಿನ ರಾಜ್ಯ ಮುಂಗಡಪತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹಣಕಾಸು ಹಂಚಿಕೆಯನ್ನು ಹೆಚ್ಚಿಸಿರುವುದು ತನಗೆ ಸಮಾಧಾನವನ್ನುಂಟು ಮಾಡಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಈ ವರ್ಷವೇ ಬೃಹತ್ ಯಶಸ್ಸನ್ನು ಸಾಧಿಸಲು ಸರಕಾರವು ಯೋಜಿಸಿದೆ ಮತ್ತು ಮಕ್ಕಳ ಅಪೌಷ್ಟಿಕತೆ ಹಾಗೂ ಜನನ ಕಾಲದಲ್ಲಿ ಸಾವುಗಳ ಪ್ರಮಾಣವನ್ನು ತಗ್ಗಿಸಲು ವಿಶೇಷ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂಬ ಮಾಹಿತಿ ಯನ್ನು ತನಗೆ ನೀಡಲಾಗಿದೆ ಎಂದು ಕುಮಾರ್ ತಿಳಿಸಿದರು.

ಉದ್ದೇಶಿತ ಕರಾವಳಿ ಆರ್ಥಿಕ ವಲಯಗಳ ಸ್ಥಾಪನೆಗೆ ಗುಜರಾತ್‌ಗೆ ನೀತಿ ಆಯೋಗವು ನೆರವಾಗಲಿದೆ ಎಂದರು.

ನೀತಿ ಆಯೋಗವು ರಾಜ್ಯಗಳ ಮುಂದೆ ಮೂರು ಯೋಜನೆಗಳ ಪ್ಯಾಕೇಜ್‌ಗಳನ್ನಿರಿಸಲಿದೆ ಮತ್ತು ರೈತರು ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಒಂದೂವರೆ ಪಟ್ಟು ಬೆಂಬಲ ಬೆಲೆ ಪಡೆಯುವಂತಾಗಲು ಸೂಕ್ತ ಯೋಜನೆಯೊಂದನ್ನು ಆಯ್ದುಕೊಳ್ಳಲು ರಾಜ್ಯಗಳು ಸ್ವತಂತ್ರವಾಗಿವೆ ಎಂದು ಅವರು ತಿಳಿಸಿದರು.

ಮುಂಬರುವ ಮುಂಗಾರು ಹಂಗಾಮಿನಲ್ಲಿ ಯೋಜನೆಯು ಸಂಪೂರ್ಣವಾಗು ಜಾರಿಗೊಳ್ಳುವಂತಾಗಲು ರೈತರು ಈ ಹಿಂಗಾರು ಋತುವಿನಿಂದಲೇ ಈ ಸೂತ್ರಕ್ಕನುಗುಣವಾಗಿ ಕನಿಷ್ಠ ಬೆಂಬಲ ಬೆಲೆಗಳನ್ನು ಪಡೆಯುವಂತೆ ಮಾಡಲು ನೀತಿ ಆಯೋಗವು ಬದ್ಧವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News