ಕಥುವಾ: ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣ; ಪೊಲೀಸರಿಗೆ ಶರಣಾದ ಮಾಜಿ ಸರಕಾರಿ ಅಧಿಕಾರಿ

Update: 2018-03-21 10:48 GMT

ಶ್ರೀನಗರ,ಮಾ.21 : ಜಮ್ಮು ಕಾಶ್ಮೀರದ ಕಥುವ ಎಂಬಲ್ಲಿ ನಡೆದ ಎಂಟು ವರ್ಷದ ಬಾಲಕಿಯೊಬ್ಬಳ ಅಪಹರಣ, ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಸಂಚು ಹೂಡಿದ್ದ ಆರೋಪ ಎದುರಿಸುತ್ತಿದ್ದ ನಿವೃತ್ತ ಸರಕಾರಿ ಅಧಿಕಾರಿ, 60 ವರ್ಷದ ಸಂಜಿ ರಾಮ್ ಇಂದು ಪೊಲೀಸರಿಗೆ ಶರಣಾಗತನಾಗಿದ್ದಾನೆ. ಘಟನೆ ಜನವರಿಯಲ್ಲಿ ನಡೆದಿತ್ತು. ಆತನನ್ನು ಬಂಧಿಸುವಂತೆ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಹೈಕೋರ್ಟ್ ಆದೇಶಿಸಿದಂದಿನಿಂದ ಆತ ಬಂಧನವನ್ನು ತಪ್ಪಿಸುತ್ತಿದ್ದ.

ಬಾಲಕಿ  ಬಖರ್ವಾಲ್ ಅಲೆಮಾರಿ ಜನಾಂಗಕ್ಕೆ ಸೇರಿದವಳಾಗಿದ್ದುದರಿಂದ ಅವಳಿಗೆ ತೊಂದರೆಯುಂಟು ಮಾಡಿ ಆ ಜನಾಂಗದ ಜನರನ್ನು ಕಥುವಾ ಪ್ರದೇಶದಿಂದ ಹೊರಗೋಡಿಸುವ ಉದ್ದೇಶ ಆರೋಪಿಗಿತ್ತು. ಆತನ ಪುತ್ರ ವಿಶಾಲ್ ನನ್ನು ಉತ್ತರ ಪ್ರದೇಶದ ಮೀರತ್ ನಗರದ ಕಾಲೇಜೊಂದರಿಂದ  ಬಂಧಿಸಿದ ನಂತರ ಆರೋಪಿ ಶರಣಾಗಿದ್ದ.

ಈ ಪ್ರಕರಣದ ದೋಷಾರೋಪ ಪಟ್ಟಿ ದಾಖಲಿಸಲು ಪೊಲೀಸರು  ಫೊರೆನ್ಸಿಕ್ ವರದಿಗಾಗಿ ಕಾಯುತ್ತಿದ್ದಾರೆ. ರಸಾನ ಗ್ರಾಮದ ದೇವಸ್ಥಾನ್ ಎಂಬ ಧಾರ್ಮಿಕ ಸ್ಥಳದಲ್ಲಿ  ಬಾಲಕಿಯನ್ನು ಬಂಧನದಲ್ಲಿರಿಸಿ ಆಕೆಗೆ ಅಮಲು ಪದಾರ್ಥ ನೀಡಿ ಸತತವಾಗಿ ಅತ್ಯಾಚಾರ ನಡೆಸಿ ಹತ್ಯೆಗೈಯ್ಯಲಾಗಿತ್ತು. ಆಕೆಯ ಮೃತದೇಹ ಜನವರಿ 17ರಂದು ಕಾಡಿನ ಮಧ್ಯ ಪತ್ತೆಯಾಗಿತ್ತು.  ಆಕೆಯ ಮೇಲೆ ಅತ್ಯಾಚಾರ ನಡೆಸಲಾದ ಧಾರ್ಮಿಕ ಸ್ಥಳವನ್ನು ಸಂಜಿ ರಾಮ್ ನೋಡಿಕೊಳ್ಳುತ್ತಿದ್ದ. ಇಲ್ಲಿ ಬಾಲಕಿಯನ್ನು ಒಂದು ವಾರ ಇರಿಸಲಾಗಿತ್ತು. ತನ್ನೊಬ್ಬನ ಬಳಿಯೇ ಈ ಸ್ಥಳದ ಕೀಲಿಕೈಗಳಿಲ್ಲ ಎಂದು ಆತ ಈ ಹಿಂದೆ ಹೇಳಿಕೊಂಡಿದ್ದ.

ಪ್ರಕರಣದ ಸಂಬಂಧ ವಿಶೇಷ ಪೊಲೀಸ್ ಅಧಿಕಾರಿ ದೀಪಕ್ ಖಜುರಿಯಾ ಹಾಗೂ ಸಂಜಿ ರಾಮ್ ನ ಸಂಬಂಧಿಯೆನ್ನಲಾದ 19 ವರ್ಷದ ಯುವಕನನ್ನು ಬಂಧಿಸಲಾಗಿದೆ. ಸಾಕ್ಷ್ಯ ನಾಶ ಪಡಿಸಿದ ಆರೋಪದ ಮೇಲೆ ಒಬ್ಬ ಎಸ್ಸೈ ಸೇರಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನೂ ಬಂಧಿಸಲಾಗಿದೆ. ಬಾಲಕಿಯ ರಕ್ತಸಿಕ್ತ ಬಟ್ಟೆಗಳನ್ನು  ತೊಳೆದು ನಂತರ ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ ಆರೋಪ ಅವರ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News