ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಪಾಕ್ ನಲ್ಲಿ ಸಿಖ್ ಯುವಕರಿಗೆ ತರಬೇತಿ

Update: 2018-03-21 15:54 GMT

ಹೊಸದಿಲ್ಲಿ,ಮಾ.21: ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನದಲ್ಲಿಯ ಐಎಸ್‌ಐ ಶಿಬಿರಗಳಲ್ಲಿ ಸಿಖ್ ಯುವಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ ಮತ್ತು ಯುರೋಪ್, ಅಮೆರಿಕ ಹಾಗೂ ಕೆನಡಾಗಳಲ್ಲಿ ನೆಲೆಸಿರುವ ಸಿಖ್ ಸಮುದಾಯದ ಸದಸ್ಯರನ್ನು ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರದೊಂದಿಗೆ ಭಾರತದ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಆದರೆ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳು ಈ ಬಗ್ಗೆ ನಿಕಟ ನಿಗಾಯಿರಿಸಿವೆ ಮತ್ತು ಅಗತ್ಯವಾದಾಗ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಗೃಹ ಸಚಿವಾಲಯವು ಸಂಸದೀಯ ಸಮಿತಿಗೆ ತಿಳಿಸಿದೆ.

 ಭಯೋತ್ಪಾದಕ ಗುಂಪುಗಳಿಂದ ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮಗಳ ದುರುಪಯೋಗದ ಮೂಲಕ ಯುವಜನತೆಯ ಮೂಲಭೂತೀಕರಣವು ದೊಡ್ಡ ಸವಾಲು ಆಗಿ ಪರಿಣಮಿಸಿದೆ ಎಂದು ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳ ತಂಡವು ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿ ನೇತೃತ್ವದ ಅಂದಾಜುಗಳ ಸಮಿತಿಗೆ ತಿಳಿಸಿದೆ.

ಸಿಖ್ ಉಗ್ರಗಾಮಿ ವಲಯದಲ್ಲಿ ಕೆಲವು ಬೆಳವಣಿಗೆಗಳು ಕಂಡು ಬಂದಿವೆ ಎಂದು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾಗಿರುವ ತನ್ನ ವರದಿಯಲ್ಲಿ ಸಮಿತಿಯು ಬೆಟ್ಟು ಮಾಡಿದೆ.

 ಪಂಜಾಬ್ ಮಾತ್ರವಲ್ಲ, ದೇಶದ ಇತರ ಭಾಗಗಳಲ್ಲಿಯೂ ತನ್ನ ಭಯೋತ್ಪಾದಕ ಯೋಜನೆಗಳನ್ನು ವಿಸ್ತರಿಸುವಂತೆ ಐಎಸ್‌ಐ ಪಾಕಿಸ್ತಾನದಲ್ಲಿ ನೆಲೆಯೂರಿರುವ ಭಯೋತ್ಪಾದಕ ಗುಂಪುಗಳ ಕಮಾಂಡರ್ ಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ವರದಿಯು ತಿಳಿಸಿದೆ.

 ಆಂತರಿಕ ಭದ್ರತೆಗೆ ಬೆದರಿಕೆಯಾಗಿರುವ ಹೊಸ ಸವಾಲುಗಳ ಕುರಿತಂತೆ ಸಚಿವಾಲಯವು ಸಮಿತಿಗೆ ಸಲ್ಲಿಸಿರುವ ಟಿಪ್ಪಣಿಯಲ್ಲಿ, ಭಯೋತ್ಪಾದಕ ಗುಂಪುಗಳಿಂದ ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯ ಮೂಲಕ ಯುವಜನರ ಮೂಲಭೂತೀಕರಣದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ.

    ಗುಪ್ತಚರ ಮತ್ತು ಕಾನೂನು ಜಾರಿ ಸಂಸ್ಥೆಗಳಿಂದ ನುಣುಚಿಕೊಳ್ಳಲು ಭಯೋತ್ಪಾದಕ ಗುಂಪುಗಳು ಸುರಕ್ಷಿತ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಪ್ರಾಕ್ಸಿ ಸರ್ವರ್‌ಗಳು ಇತ್ಯಾದಿಗಳನ್ನು ಬಳಸಿಕೊಳ್ಳಲು ಆರಂಭಿಸಿರುವುದು ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ ಎಂದಿರುವ ಸಚಿವಾಲಯವು, ಸಂಘರ್ಷಪೀಡಿತ ಪ್ರದೇಶಗಳಿಂದ ಮರಳುತ್ತಿರುವ ಮೂಲಭೂತೀಕರಣಗೊಂಡ ಜನರ ಚಟುವಟಿಕೆಗಳು ಮತ್ತು ‘ಒಂಟಿ ತೋಳ’ದಾಳಿಯ ಬೆದರಿಕೆ ಕೂಡ ಸವಾಲುಗಳಾಗಿವೆ ಎಂದು ತಿಳಿಸಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಹಾಗೂ ಸಿಮಿ ಮತ್ತು ಅಲ್-ಉನ್ಮಾದಂತಹ ಗುಂಪುಗಳ ಜೊತೆಗೆ ಇಂಡಿಯನ್ ಮುಜಾಹಿದೀನ್‌ನ ಬಣಕ್ಕೂ ಭಾರತವು ಮುಖ್ಯ ಗುರಿಯಾಗಿಯೇ ಮುಂದುವರಿದಿದೆ ಎಂದೂ ಸಚಿವಾಲಯವು ಸಮಿತಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News