ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ ಕಾಂಗ್ರೆಸ್ ಸಂಬಂಧ ಪ್ರಶ್ನಿಸಿದ ಬಿಜೆಪಿ!

Update: 2018-03-21 15:53 GMT

ಹೊಸದಿಲ್ಲಿ, ಮಾ.21: ಹಲವು ದೇಶಗಳಲ್ಲಿ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಲುವಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಿಂದ ವೈಯಕ್ತಿಕ ಮಾಹಿತಿಯನ್ನು ಕದ್ದಿರುವ ಆರೋಪವನ್ನು ಎದುರಿಸುತ್ತಿರುವ ಕೇಂಬ್ರಿಡ್ಜ್ ಅನಾಲಿಟಿಕ ಸಂಸ್ಥೆ ಜೊತೆ ಕಾಂಗ್ರೆಸ್ ಪಕ್ಷಕ್ಕಿರುವ ಸಂಬಂಧವನ್ನು ಬಿಜೆಪಿಯು ಬುಧವಾರ ಪ್ರಶ್ನಿಸಿದೆ. ಕಾಂಗ್ರೆಸ್ ಈಗ ಮತದಾರರನ್ನು ಸೆಳೆಯಲು ದತ್ತಾಂಶ ಕಳ್ಳತನದ ಹಾದಿಯನ್ನು ಹಿಡಿದಿದೆ ಎಂದು ಬಿಜೆಪಿ ಆರೋಪಿಸಿದೆ.

 ಮುಂದಿನ ಲೋಕಸಭಾ ಚುನಾವಣೆ ಹಾಗೂ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯ ವರ್ಚಸ್ಸನ್ನು ವೃದ್ಧಿಸಲು ಆರೋಪಿತ ಸಂಸ್ಥೆಯ ನೆರವನ್ನು ಪಡೆಯಲು ಕಾಂಗ್ರೆಸ್ ಯೋಚಿಸಿತ್ತು ಎಂಬ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅಭಿಮಾನಿಗಳನ್ನು ಹೆಚ್ಚಿಸಲು ರಾಹುಲ್ ಗಾಂಧಿ ಆರೋಪಿತ ಸಂಸ್ಥೆಯಿಂದ ಸಹಾಯ ಪಡೆದಿದ್ದಾರೆಯೇ ಎಂಬುದನ್ನು ವಿವರಿಸುವಂತೆ ಆಗ್ರಹಿಸಿದ್ದಾರೆ.

 ಕೇಂಬ್ರಿಡ್ಜ್ ಅನಾಲಿಟಿಕ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಸೆಕ್ಸ್, ಅಶ್ಲೀಲತೆ ಮತ್ತು ಸುಳ್ಳು ಸುದ್ದಿಗಳನ್ನು ಬಳಸುತ್ತಿದೆ ಎಂಬ ಆರೋಪವಿದೆ. ಈಗ ಕಾಂಗ್ರೆಸ್ ಕೂಡಾ ಇದೇ ಹಾದಿಯನ್ನು ತುಳಿಯಲು ಯೋಚಿಸುತ್ತಿದೆಯೇ ಎಂದು ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟ್ವಿಟರ್‌ನಲ್ಲಿ ರಾಹುಲ್ ಗಾಂಧಿಯ ಫಾಲೊವರ್‌ಗಳ ಸಂಖ್ಯೆ ಏಕಾಏಕಿ ಏರಿಕೆಯಾಗಿರುವುದು ಇದೇ ಸಂಸ್ಥೆಯ ಸಹಾಯದಿಂದಲೇ ಎಂದು ಅವರು ರವಿಶಂಕರ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News