ಮಡಿಕೇರಿ: ಇಂದಿರಾ ಕ್ಯಾಂಟೀನ್‍ ಉದ್ಘಾಟನೆ

Update: 2018-03-22 17:46 GMT

ಮಡಿಕೇರಿ, ಮಾ.22: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಹಸಿವು ಮುಕ್ತ ಕರ್ನಾಟಕದ ಗುರಿಯ ‘ಇಂದಿರಾ ಕ್ಯಾಂಟೀನ್’ನ್ನು ಮಡಿಕೇರಿಯಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಅರ್.ಸೀತಾರಾಂ ಉದ್ಘಾಟಿಸಿದರು. 

ನಗರದ ನೂತನ ಖಾಸಗಿ ಬಸ್ ನಿಲ್ದಾಣ ಬಳಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ನಂತರ ಇಡ್ಲಿ ಮತ್ತು ಕೇಸರಿಬಾತ್‍ನ್ನು ಜಿಲ್ಲಾ ಉಸ್ತುವಾರಿ ಸಚಿವರು ಸವಿದರು. ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಇಂದಿರಾ ಕ್ಯಾಂಟೀನ್‍ನಲ್ಲಿ ಬಡವರು, ಶ್ರಮಿಕರು ಹೀಗೆ ಎಲ್ಲರೂ ಕಡಿಮೆ ದರದಲ್ಲಿ ಉಪಹಾರ, ಊಟ ದೊರೆಯಲಿದೆ. ಯಾರೂ ಸಹ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಇಂದಿರಾ ಕ್ಯಾಂಟೀನ್ ಮಹಾತ್ವಾಕಾಂಕ್ಷೆ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು. 

ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸುವ ಮೂಲಕ ಎಲ್ಲಾ ಜನರ ಹಸಿವು ನೀಗಿಸಲು ಪ್ರಯತ್ನಿಸಿದೆ. ಹಾಗೆಯೇ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಮೂಲಕ ಇಲ್ಲಿನ ಜನರಿಗೆ ಅನುಕೂಲವಾಗಲಿದೆ ಎಂದು ಸಚಿವರು ನುಡಿದರು.   

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವರಾದ ಎಂ.ಸಿ.ನಾಣಯ್ಯ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಿ.ಪಂ.ಸದಸ್ಯರಾದ ಕೆ.ಪಿ.ಚಂದ್ರಕಲಾ, ಕುಮುದ ಧರ್ಮಪ್ಪ, ಸುನೀತ, ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ, ಲೀಲಾ ಶೇಷಮ್ಮ, ಶ್ರೀಮತಿ ಬಂಗೇರಾ, ಜುಲೇಕಾಬಿ, ಪೀಟರ್, ವೀಣಾಕ್ಷಿ, ಅಮಿನ್ ಮೊಹಿಸಿನ್, ಮನ್ಸೂರ್,  ಉದಯಕುಮಾರ್, ವೆಂಕಟೇಶ್, ಗಿಲ್ರ್ಬಟ್, ಉಸ್ಮಾನ್, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಗೋಪಾಲ ಕೃಷ್ಣ, ಪೌರಾಯುಕ್ತರಾದ ಬಿ.ಶುಭ ಇತರರು ಇದ್ದರು.   

ಇಂದಿರಾ ಕ್ಯಾಂಟೀನ್ ಹೀಗಿದೆ
ಅತಿ ಕಡಿಮೇ ದರದಲ್ಲಿ ಶುಚಿ ರುಚಿಯಾದ ಊಟ ಮತ್ತು ಉಪಹಾರ 30 ಜಿಲ್ಲೆಗಳ 173 ನಗರ ಸ್ಥಳೀಯ ಸಂಸ್ಥೆಗಳಲ್ಲಿ ರೂ.145.24 ಕೋಟಿಗಳ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್‍ಗಳ ನಿರ್ಮಾಣ ಮತ್ತು 76 ಸ್ವತಂತ್ರ ಕ್ಯಾಂಟೀನ್‍ಗಳು 15 ಸ್ವತಂತ್ರ ಅಡುಗೆ ಕೋಣೆಗಳು, 171 ಅಡುಗೆ ಕೋಣೆಗಳನ್ನೊಳಗೊಂಡ ಕ್ಯಾಂಟೀನ್‍ಗಳು ರೂ.42 ಕೋಟಿಗಳ ವೆಚ್ಚದಲ್ಲಿ ಅಡುಗೆ ಕೋಣೆ ಮತ್ತು ಕ್ಯಾಂಟೀನ್‍ಗಳ ಉಪಕರಣಗಳ ಖರೀದಿ, ಪ್ರತಿ ದಿನ 1,00,300 ಜನರಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ಹಾಗೂ ರಾತ್ರಿ ಊಟ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿ ನಗರದಲ್ಲಿ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್ ಕೂಡ ಇದೇ ರೀತಿಯಾಗಿ ಕಾರ್ಯ ನಿರ್ವಹಿಸಲಿದ್ದು, ಶ್ರಮಿಕ ವರ್ಗ ಹಾಗೂ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ, ಉಪಹಾರ ಸಿಗಲಿದೆ.

ಜನಮೆಚ್ಚುಗೆ
ಪಲಾವ್, ಇಡ್ಲಿ, ಸಾಂಬಾರ್, ಅನ್ನ ಸಾಂಬಾರ್, ಮೊಸರನ್ನ ಸೂಪರ್, ಇದೇ ಕ್ವಾಲಿಟಿ ಮುಂದೆಯೂ ಇರಲಿ ಎಂದು ಇಂದಿರಾ ಕ್ಯಾಂಟೀನ್‍ನ ಊಟ, ಉಪಹಾರಕ್ಕೆ ಮನಸೋತ ಮಡಿಕೇರಿ ಜನ ಅಭಿಪ್ರಾಯಪಟ್ಟರು. ಬೆಳಗ್ಗೆ 5 ರೂ.ಗೆ ಪಲಾವ್, ಇಡ್ಲಿ, ಸಾಂಬಾರ್, ಕೇಸರಿ ಬಾತ್ ಸವಿದ ಜನ ಉದ್ಘಾಟನೆಯ ದಿನವೆಂದು ರುಚಿ ರುಚಿ ನೀಡಿದ್ದೀರಿ, ದಿನವೂ ಇದೇ ರೀತಿಯ ಗುಣಮಟ್ಟದ ಅಡುಗೆ ಮಾಡಿ ಎಂದು ಸಲಹೆ ನೀಡಿದರು.

ಮಧ್ಯಾಹ್ನದ ಊಟಕ್ಕೆ ಸಾಲುಗಟ್ಟಿ ನಿಂತ ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಟೋ, ಟ್ಯಾಕ್ಸಿ ಚಾಲಕರುಗಳು ಹಾಗೂ ಕಾರ್ಮಿಕರು 10 ರೂ.ಗೆ ಅನ್ನ ಸಾಂಬಾರ್, ಮೊಸರನ್ನವನ್ನು ಸವಿದು ಸೂಪರ್ ಎಂದರು. ಮುಂದೆಯೂ ಇದೇ ರೀತಿ ರುಚಿ ರುಚಿಯಾಗಿರಲಿ ಎಂದು ಕೃತಜ್ಞತಾಭಾವ ತೋರಿದರು.  

ಇದು ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ಜನಪರವಾದ ಯೋಜನೆಯಾಗಿದ್ದು, ಇಂದಿನ ದುಬಾರಿ ಬೆಲೆಯ ದಿನಗಳಲ್ಲಿ ಶ್ರಮಿಕ ವರ್ಗ ಹಾಗೂ ಬಡವರಿಗೆ ಹೆಚ್ಚು ಸಹಕಾರಿಯಾಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಯು.ಅಬ್ದುಲ್ ರಜಾಕ್ ಮೆಚ್ಚುಗೆ ವ್ಯಕ್ತಪಡಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News