20 ಆಪ್ ಶಾಸಕರ ಅನರ್ಹತೆ ಆದೇಶ ರದ್ದುಗೊಳಿಸಿದ ಹೈಕೋರ್ಟ್

Update: 2018-03-23 16:41 GMT

ಹೊಸದಿಲ್ಲಿ, ಮಾ.23: ಸಂಸದೀಯ ಕಾರ್ಯದರ್ಶಿಯಂತಹ ಲಾಭದಾಯಕ ಹುದ್ದೆಯಲ್ಲಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರಕಾರದ 20 ಆಮ್ ಆದ್ಮಿ ಪಕ್ಷದ ಶಾಸಕರನ್ನು ಅನರ್ಹಗೊಳಿಸಿದ ಕೇಂದ್ರ ಚುನಾವಣಾ ಆಯೋಗದ ಆದೇಶವನ್ನು ದಿಲ್ಲಿ ಹೈಕೋರ್ಟ್ ರದ್ದುಪಡಿಸಿದೆ.

ಸಿಎಂ ಕೇಜ್ರಿವಾಲ್ ಸಚಿವ ಸ್ಥಾನ ಸಿಗದ ತನ್ನ ಪಕ್ಷದ 20 ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 20 ಶಾಸಕರನ್ನು ಅನರ್ಹಗೊಳಿಸಿತ್ತು. ಕೇಂದ್ರ ಚುನಾವಣಾ ಆಯೋಗ ಮತ್ತೊಮ್ಮೆ ಆಪ್ ಶಾಸಕರ ವಿಚಾರಣೆ ನಡೆಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.

► ಆದೇಶ ಮರು ಪರಿಶೀಲಿಸಿ: ಹೈಕೋರ್ಟ್

ಆಪ್‌ನ 20 ಶಾಸಕರನ್ನು ಅನರ್ಹ ಗೊಳಿಸಿರುವ ಆದೇಶ ಮರು ಪರಿಶೀಲಿಸಿ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ. ಆಪ್‌ನ 20 ಶಾಸಕರನ್ನು ಅನರ್ಹಗೊಳಿಸಿರುವ ಚುನಾವಣಾ ಆಯೋಗದ ಆದೇಶ ತಳ್ಳಿ ಹಾಕಿರುವ ನ್ಯಾಯಾಲಯ ರಾಷ್ಟ್ರಪತಿ ಅವರ ಅಧಿಸೂಚನೆ ರದ್ದುಗೊಳಿಸಿದೆ ಹಾಗೂ ಪ್ರಕರಣವನ್ನು ಮತ್ತೊಮ್ಮೆ ವಿಚಾರಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

►ಸತ್ಯ ಗೆದ್ದಿತು: ಕೇಜ್ರಿವಾಲ್

ಸತ್ಯ ಗೆದ್ದಿತು. ದಿಲ್ಲಿಯ ಚುನಾಯಿತ ಪ್ರತಿನಿಧಿಗಳನ್ನು ತಪ್ಪಾಗಿ ಅನರ್ಹಗೊಳಿಸಲಾಗಿತ್ತು. ದಿಲ್ಲಿಯ ಜನರಿಗೆ ದಿಲ್ಲಿ ಉಚ್ಚ ನ್ಯಾಯಾಲಯ ನ್ಯಾಯ ನೀಡಿದೆ. ಇದು ದಿಲ್ಲಿಯ ಜನರ ಅತಿ ದೊಡ್ಡ ಜಯ. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ

ಅರವಿಂದ ಕೇಜ್ರಿವಾಲ್ ದಿಲ್ಲಿ ಮುಖ್ಯಮಂತ್ರಿ, ಆಪ್ ಸಂಚಾಲಕ

2015 ಮಾರ್ಚ್‌ನಲ್ಲಿ ದಿಲ್ಲಿ ಸರಕಾರ 21 ಮಂದಿ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನಿಯೋಜಿಸಿತ್ತು. ಸಂಪುಟ ಸಚಿವರಿಗೆ ನೆರವು ನೀಡುವುದು ಹಾಗೂ ಶಾಸಕರನ್ನು ಆಡಳಿತಾತ್ಮಕ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಇವರಲ್ಲಿ ಓರ್ವ ಶಾಸಕರು ರಾಜೀನಾಮೆ ನೀಡಿದ್ದರು. ಸಚಿವರಂತೆ ಇವರಿಗೆ ಕೂಡ ಭತ್ತೆ ನೀಡಲಾಗುತ್ತಿತ್ತು. ಆದರೆ, ಚುನಾಯಿತ ಪ್ರತಿನಿಧಿಗಳು ಅಧಿಕಾರದ ಅವಧಿಯಲ್ಲಿ ಲಾಭದಾಯಕ ಹುದ್ದೆ ಹೊಂದುವುದು ಕಾನೂನು ಪ್ರಕಾರ ತಪ್ಪು. ಈ ಹಿನ್ನೆಲೆಯಲ್ಲಿ ನ್ಯಾಯವಾದಿ ಪ್ರಶಾಂತ್ ಪಟೇಲ್ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ದೂರು ಸಲ್ಲಿಸಿದ್ದರು. ದೂರನ್ನು ಪ್ರಣವ್ ಮುಖರ್ಜಿ ಅವರು ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News