ಮೈಸೂರು: ರಾಹುಲ್ ಗಾಂಧಿಗೆ ಸ್ವಾಗತ ಕೋರುವ ನೈಟ್ರೋಜನ್ ಬಲೂನ್ ಸ್ಪೋಟ: 8 ಮಕ್ಕಳು ಸೇರಿ 10 ಮಂದಿಗೆ ಗಾಯ

Update: 2018-03-23 16:16 GMT

ಮೈಸೂರು,ಮಾ.23: ರಾಹುಲ್ ಆಗಮನಕ್ಕೆ ಸ್ವಾಗತ ಕೋರಲು ಹಾಕಲಾಗಿದ್ದ ನೈಟ್ರೋಜನ್ ಬಲೂನ್ ಸ್ಪೋಟಗೊಂಡ ಪರಿಣಾಮ ಎಂಟು ಮಕ್ಕಳು ಸೇರಿದಂತೆ ಹತ್ತು ಜನ ಗಾಯಗೊಂಡಿದ್ದು, ಮೂವರು ಮಕ್ಕಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಶ್ರೀರಂಗಪಟ್ಟಣ ಟೌನ್ ಕಾವೇರಿಪುರದ ಹಳೆ ಸಂತೆ ಮೈದಾನದಲ್ಲಿ ನಡೆದಿದೆ.

ಮಾ.24 ರಂದು ಶ್ರೀರಂಗಪಟ್ಟಣಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುವ ಹಿನ್ನಲೆಯಲ್ಲಿ ನೈಟ್ರೋಜನ್ ತುಂಬಿದ್ದ ಬಲೂನ್ ಅನ್ನು ಮೇಲಕ್ಕೆ ಹಾರಿಸುವ ವೇಳೆ ಬಿಸಿ ಗಾಳಿ ಹೊರ ಬಂದ ಪರಿಣಾಮ ಬಲೂನ್ ಸಿಡಿದಿದೆ. ಬಲೂನ್ ಮೇಲಕ್ಕೆ ಹಾರಿಸುವುದನ್ನು ಕುತೂಹಲದಿಂದ ನೋಡುತ್ತಿದ್ದ ಎಂಟು ಮಕ್ಕಳು ಸೇರಿದಂತೆ ಇಬ್ಬರು ಯುವಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತಕ್ಷಣ ಗಾಯಗೊಂಡವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರು ಮಕ್ಕಳಿಗೆ ಗಂಭೀರ ಗಾಯಗಳಾದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಒಂದು ಟಾಟಾ ಏಸ್ ಆಟೋ ಹಾಗೂ 5 ಸಿಲಿಂಡರ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಘಟನೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News