ಚಂದ್ರಯಾನ-2 ಅಕ್ಟೋಬರ್‌ಗೆ ಮುಂದೂಡಿಕೆ:ಇಸ್ರೋ ಅಧ್ಯಕ್ಷ

Update: 2018-03-23 15:54 GMT
ಇಸ್ರೋ ಅಧ್ಯಕ್ಷ ಕೆ.ಶಿವನ್ 

ಚೆನ್ನೈ,ಮಾ.23: ತಜ್ಞರು ಕೆಲವು ಪರೀಕ್ಷೆಗಳನ್ನು ಸೂಚಿಸಿರುವ ಹಿನ್ನೆಲೆಯಲ್ಲಿ ಎಪ್ರಿಲ್‌ಗೆ ನಿಗದಿಯಾಗಿದ್ದ ಭಾರತದ ಎರಡನೇ ಚಂದ್ರ ಅಭಿಯಾನ ‘ಚಂದ್ರಯಾನ-2’ ೞಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

 ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್‌ನ್ನು ಇಳಿಸಲು ಮೊದಲ ಬಾರಿಗೆ ಇಸ್ರೋ ಪ್ರಯತ್ನಿಸಲಿರುವ ಚಂದ್ರಯಾನ-2 ಎಪ್ರಿಲ್‌ನಲ್ಲಿ ಉಡಾವಣೆಗೊಳ್ಳಲಿದೆ ಎಂದು ಬಾಹ್ಯಾಕಾಶ ಇಲಾಖೆಯ ಉಸ್ತುವಾರಿ ಹೊಂದಿರುವ ಪ್ರಧಾನಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರು ಕಳೆದ ಎಪ್ರಿಲ್‌ನಲ್ಲಿ ತಿಳಿಸಿದ್ದರು.

800 ಕೋ.ರೂ.ವೆಚ್ಚದ ಚಂದ್ರಯಾನ-2 ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಒಳಗೊಂಡಿರುವ ಸಂಪೂರ್ಣ ಸ್ವದೇಶಿ ಅಭಿಯಾನವಾಗಿದೆ ಎಂದು ಇಸ್ರೋ ತಿಳಿಸಿದೆ.

ಸುಮಾರು 3,290 ಕೆ.ಜಿ.ತೂಗುವ ಚಂದ್ರಯಾನ-2 ಅಂತರಿಕ್ಷ ನೌಕೆಯು ಚಂದ್ರನ ಸುತ್ತ ಪರಿಭ್ರಮಿಸಲಿದೆ ಮತ್ತು ರಿಮೋಟ್ ಸೆನ್ಸಿಂಗ್ ಮೂಲಕ ಚಂದ್ರನ ಕುರಿತು ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲಿದೆ.

ಇಸ್ರೋ ತನ್ನ ಚೊಚ್ಚಲ ಚಂದ್ರಯಾನ-1 ಅನ್ನು 2008ರಲ್ಲಿ ಕೈಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News