ಕುವೆಂಪು ನಿವಾಸಕ್ಕೆ ಅಮಿತ್ ಶಾ ಭೇಟಿ ವಿರೋಧಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ

Update: 2018-03-25 13:37 GMT

ಶಿವಮೊಗ್ಗ, ಮಾ. 25: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ದಿವಂಗತ ಕುವೆಂಪುರವರ ಕವಿಶೈಲ ಮನೆಗೆ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ನೀಡಿ ಅಪವಿತ್ರಗೊಳಿಸಬಾರದು ಎಂದು ಎನ್‍ಎಸ್‍ಯುಐ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ. 

ಈ ಸಂಬಂಧ ಸಂಘಟನೆಯ ಕಾರ್ಯಕರ್ತರು ರವಿವಾರ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರ ಆವರಣದಲ್ಲಿರುವ ಕುವೆಂಪುರವರ ಪ್ರತಿಮೆಯ ಮುಂಭಾಗ ಅಮಿತ್ ಶಾ ವಿರುದ್ದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಅವರ ವಿರುದ್ದ ಘೋಷಣೆ ಕೂಗಿದರು. 

'ಕನ್ನಡ ಸಾರಸ್ವತ ಲೋಕದ ಮಹಾನ್ ಸಾಹಿತಿಯಾದ ಕುವೆಂಪುರವರು ವಿಶ್ವ ಮಾನವತೆಯ ಸಂದೇಶ ಸಾರಿದರು. ಜಾತ್ಯತೀತತೆ, ಭ್ರಾತೃತ್ವ, ಮಾನವೀಯತೆ, ಸಹೋದರತೆ, ಸಾಮಾಜಿಕ ಸಾಮರಸ್ಯ ಸೇರಿದಂತೆ ಹಲವು ಸಮಾಜಮುಖಿ ಅಂಶಗಳ ಕುರಿತಂತೆ ಅವರು ತಮ್ಮ ಬರಹದಲ್ಲಿ ಸಾಕಷ್ಟು ಒತ್ತು ನೀಡಿದ್ದರು. ತಮ್ಮ ಸಾಹಿತ್ಯ ಕೃತಿಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುವ ಕಾರ್ಯ ಮಾಡಿದ್ದಾರೆ. 

ಈ ಕಾರಣದಿಂದಲೇ ಕುವೆಂಪುರವರ ಹೆಸರು ಹಾಗೂ ಅವರ ಸಾಹಿತ್ಯ ಕೃತಿಗಳು ಸಾರಸ್ವತ ಲೋಕದಲ್ಲಿ ಅಜರಾಮರವಾಗಿವೆ. ಅವರ ತತ್ವಾದರ್ಶ, ಬದುಕು-ಜೀವನ, ಬೋಧನೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಅವರು ಬದುಕಿ ಬಾಳಿದ ಕುಪ್ಪಳ್ಳಿಯಲ್ಲಿರುವ ಕವಿಶೈಲ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲಾಗಿದೆ. ಸರ್ಕಾರವೇ ತನ್ನ ಸುಪರ್ದಿಗೆ ತೆಗೆದುಕೊಂಡು ನಿರ್ವಹಣೆ ಮಾಡುತ್ತಿದೆ. 

ಇಂತಹ ಪವಿತ್ರ ಕವಿಶೈಲ ನಿವಾಸಕ್ಕೆ ಕೋಮುವಾದಿ, ಫ್ಯಾಸ್ಟಿಸ್ಟ್ ಮನೋಭಾವದ, ಸ್ವಾರ್ಥ ರಾಜಕೀಯ ಹಿತಾಸಕ್ತಿಗಾಗಿ ಧರ್ಮ - ಧರ್ಮಗಳ ನಡುವೆ ವೈಮನಸ್ಸು ಸೃಷ್ಟಿಸುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರವರಂತಹ ವ್ಯಕ್ತಿತ್ವದವರು ಭೇಟಿ ನೀಡಬಾರದು. ಈ ಮೂಲಕ ಕವಿಶೈಲದ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸ ಮಾಡಬಾರದು' ಎಂದು ಪ್ರತಿಭಟನೆಯ ನೇತೃತ್ವವಹಿಸಿದ್ದ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಜೆ.ಮಧುಸೂಧನ್ ಆಗ್ರಹಿಸಿದ್ದಾರೆ. 

ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಲ್ಲಿ ಮಾನವೀಯತೆ, ಜಾತ್ಯತೀತ, ವಿಶ್ವ ಮಾನವೀಯತೆಯ ಪರಿಕಲ್ಪನೆಗಳೇ ಇಲ್ಲವೇ. ರಾಜಕೀಯವಾಗಿ ಬೆಳೆಯಲು ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ. ಕೋಮು ರಾಜಕಾರಣ ನಡೆಸುತ್ತಿದ್ದಾರೆ. ಇದಕ್ಕೆ ಈ ಹಿಂದೆ ಗುಜರಾತ್‍ನಲ್ಲಿ ಇವರ ಅಧಿಕಾರಾವಧಿಯಲ್ಲಿ ನಡೆದಿರುವ ಕೋಮುಗಲಭೆ, ಹತ್ಯಾಕಾಂಡಗಳೇ ಸಾಕ್ಷಿಯಾಗಿವೆ ಎಂದು ಆರೋಪಿಸಿದ್ದಾರೆ. 

ಈ ಎಲ್ಲ ಕಾರಣಗಳಿಂದ ಅಮಿತ್ ಶಾ ರಂತಹ ವ್ಯಕ್ತಿತ್ವದವರು ಕುವೆಂಪುರವರ ನಿವಾಸಕ್ಕೆ ಭೇಟಿ ನೀಡುವುದನ್ನು ಖಂಡಿಸುತ್ತೇವೆ. ಇದು ಬಹುತೇಕ ಕುವೆಂಪು ಅಭಿಮಾನಿಗಳ ಆಗ್ರಹವೂ ಆಗಿದೆ. ಇದನ್ನು ಮನಗಂಡು ಅಮಿತ್ ಶಾರವರು ಕುವೆಂಪು ಮನೆಗೆ ಭೇಟಿ ನೀಡುವುದರಿಂದ ಹಿಂದೆ ಸರಿಯಬೇಕು ಎಂದು ಇದೇ ಸಂದರ್ಭದಲ್ಲಿ ಸಿ.ಜೆ.ಮಧುಸೂಧನ್ ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಎನ್‍ಎಸ್‍ಯುಐ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಚೇತನ್, ಜಿಲ್ಲಾಧ್ಯಕ್ಷ ಬಾಲಾಜಿ, ಆರೀಫ್ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News