ಸುಪ್ರೀಂ ತೀರ್ಪಿಗೂ ಮೊದಲೇ ರೋಗಿಗಳಿಗೆ ಜೀವರಕ್ಷಕ ನಿರಾಕರಣೆ ಮಾಡಲಾಗುತ್ತಿತ್ತು: ವರದಿ

Update: 2018-03-25 14:47 GMT

ಪುಣೆ, ಮಾ.25: ಮಾರ್ಚ್ 9ರಂದು ಸರ್ವೋಚ್ಚ ನ್ಯಾಯಾಲಯವು ಪರೋಕ್ಷ ದಯಾಮರಣದ ಪರ ತೀರ್ಪು ನೀಡುತ್ತಾ ರೋಗಿಗೆ ಜೀವರಕ್ಷಕಗಳನ್ನು ನಿರಾಕರಿಸುವ ಹಕ್ಕನ್ನು ನೀಡಿತು. ಆದರೆ ಈ ತೀರ್ಪಿಗೂ ಮೊದಲೇ ಪುಣೆಯ ಕೆಲವು ಆಸ್ಪತ್ರೆಗಳಲ್ಲಿ ರೋಗಿಯು ಇನ್ನು ಬದುಕುಳಿಯುವುದು ಅಸಾಧ್ಯ ಎಂಬ ಸ್ಥಿತಿಯಲ್ಲಿ ಆ ರೋಗಿ ಅಥವಾ ಅವರ ಕುಟುಂಬಸ್ಥರು ಜೀವರಕ್ಷಗಳನ್ನು ನಿರಾಕರಿಸಿದ ಉದಾಹರಣೆಗಳಿವೆ ಎಂದು ವರದಿಯೊಂದು ತಿಳಿಸಿದೆ.

ಮಾರ್ಚ್ 9ರ ಆದೇಶಕ್ಕೂ ಮೊದಲೇ ಪರೋಕ್ಷ ದಯಾಮರಣವು ನ್ಯಾಯಬದ್ಧವಾಗಿತ್ತು. ಆದರೆ, ವಿಶೇಷವಾಗಿ ರೋಗಿಯು ಕೋಮಾದಲ್ಲಿದ್ದರೆ ಅಥವಾ ಆಯ್ಕೆ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ ಅಂಥ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದ ಅನುಮತಿ ಪಡೆಯುವ ಅಗತ್ಯವಿತ್ತು. ಆದರೆ ಈ ಅಗತ್ಯವು ಈಗಾಗಲೇ ಜೀವರಕ್ಷಕ ಸಾಧನವನ್ನು ಅಳವಡಿಸಿದವರಿಗೆ ಮಾತ್ರ ಬೀಳುತ್ತಿತ್ತು. ಇನ್ನೇನು ಬದುಕುಳಿಯುದೇ ಇಲ್ಲ ಎಂಬ ಪರಿಸ್ಥಿತಿಯಲ್ಲಿ ಜೀವರಕ್ಷಕಗಳನ್ನು ನಿರಾಕರಿಸುವ ಹಕ್ಕು ಈ ಹಿಂದೆಯೂ ರೋಗಿಗಳಿಗೆ ಮತ್ತು ಕುಟುಂಬಸ್ಥರಿಗೆ ಇತ್ತು. ಉದಾಹರಣೆಗೆ, 550 ಹಾಸಿಗೆಗಳ ರೂಬಿ ಹಾಲ್ ಕ್ಲಿನಿಕ್‌ನಲ್ಲಿ ಕಳೆದ ವರ್ಷ ಜನವರಿ ಮತ್ತು ಡಿಸೆಂಬರ್ ಮಧ್ಯೆ 5000ಕ್ಕೂ ಅಧಿಕ ರೋಗಿಗಳು ವಿವಿಧ ತೀವ್ರನಿಗಾ ಘಟಕಗಳಲ್ಲಿ ದಾಖಲಾಗಿದ್ದರು. ಅಲ್ಲಿನ ವೈದ್ಯರ ಪ್ರಕಾರ, ಆ ವರ್ಷ 77 ರೋಗಿಗಳು ಜೀವರಕ್ಷಕಗಳನ್ನು ಪಡೆಯಲು ನಿರಾಕರಿಸಿದ್ದರು. ಅವರಲ್ಲಿ ಕೆಲವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಪಡೆದು ಮನೆಗೆ ತೆರಳಿದ್ದರು. ಇದೇ ರೀತಿ, ಜಹಂಗೀರ್ ಆಸ್ಪತ್ರೆಯಲ್ಲೂ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದ 415 ರೋಗಿಗಳ ಪೈಕಿ ಸುಮಾರು ಶೇ.20 ರೋಗಿಗಳು ಜೀವರಕ್ಷಕಗಳನ್ನು ನಿರಾಕರಿಸಿದ್ದರು. ನಮ್ಮ ಆಸ್ಪತ್ರೆಯಲ್ಲಿ ಜೀವರಕ್ಷಗಳನ್ನು ನಿರಾಕರಿಸುವುದೆಂದರೆ ರೋಗಿಯನ್ನು ಘನತೆಯಿಂದ ಪ್ರಾಣ ಬಿಡಲು ಬಿಡುವುದು ಎಂದು ಅಲ್ಲಿನ ಐಸಿಯು ಮುಖ್ಯಸ್ಥ ಕಯನೂಶ್ ಕಡಪಟಿ ತಿಳಿಸುತ್ತಾರೆ.

ವೈದ್ಯಕೀಯ ಸೇವೆಗಳು ವಿಫಲವಾದ ಪರಿಸ್ಥಿತಿಯಲ್ಲಿ ರೋಗಿಯು ತನ್ನ ಕೊನೆಯ ದಿನಗಳನ್ನು ಉತ್ತಮವಾಗಿ ಕಳೆಯುವಂತೆ ನೊಡಿಕೊಳ್ಳುವುದು ಒಳಿತು. ಹಾಗಾಗಿ ಅಂಥ ರೋಗಿಗಳ ಕುಟುಂಬಸ್ಥರ ಜೊತೆ ಸಮಾಲೋಚನೆ ನಡೆಸಿ ಅವರ ಸಮ್ಮತಿಯನ್ನು ಪಡೆದ ನಂತರ ರೋಗಿಗೆ ಜೀವರಕ್ಷಕಗಳನ್ನು ನೀಡುವುದನ್ನು ನಿಲ್ಲಿಸಲಾಗುತ್ತದೆ ಎಂದು ಕಯನೂಶ್ ತಿಳಿಸುತ್ತಾರೆ. ವಿದೇಶಗಳಲ್ಲಿ ಸಂಭವಿಸುವ ಐಸಿಯು ಸಾವುಗಳಲ್ಲಿ ಶೇ.65ರಿಂದ 70 ಸಾವುಗಳು ಜೀವರಕ್ಷಕಗಳ ನಿರಾಕರಣೆಯಿಂದ ನಡೆಯುತ್ತದೆ. ಆದರೆ ಭಾರತದಲ್ಲಿ ಈ ಬಗ್ಗೆ ನಿಖರ ಅಂಕಿಅಂಶ ಲಭ್ಯವಾಗದಿದ್ದರೂ ಅಂದಾಜಿನ ಪ್ರಕಾರ ಕೇವಲ ಶೇ. 1ರಿಂದ 2 ರೋಗಿಗಳು ಮಾತ್ರ ಪರೋಕ್ಷ ದಯಾಮರಣವನ್ನು ಬಯಸುತ್ತಾರೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News