ಪಶ್ಚಿಮ ಬಂಗಾಳ: ರಾಮನವಮಿ ರ‍್ಯಾಲಿ ವೇಳೆ ಘರ್ಷಣೆ; ಓರ್ವ ಮೃತ್ಯು

Update: 2018-03-25 16:16 GMT

ಪುರುಲಿಯಾ, ಮಾ. 25: ಪಶ್ಚಿಮಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದ ರಾಮನವಮಿ ಮೆರವಣಿಗೆ ಸಂದರ್ಭ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ 55 ವರ್ಷದ ವೃದ್ಧನೋರ್ವ ಮೃತಪಟ್ಟಿದ್ದಾನೆ. ಬಿಜೆಪಿ ಆಯೋಜಿಸಿದ ಪುರುಲಿಯದ ಬೆಲ್ಡಿ ಗ್ರಾಮದ ಶಿವಮಂದಿರದಿಂದ ನಡೆದ ರಾಮನವಮಿ ಮೆರವಣಿಗೆ ಸಂದರ್ಭ ಭುಸ್ರಾದ ಇಬ್ಬರು ನಿವಾಸಿಗಳ ನಡುವಿನ ಘರ್ಷಣೆ ವೃದ್ದನ ಹತ್ಯೆಯಲ್ಲಿ ಪರ್ಯಾವಸಾನಗೊಂಡಿದೆ. 

ಘರ್ಷಣೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಎಸ್.ಕೆ. ಶಹಾಜಹಾನ್ (55) ಎಂದು ಗುರುತಿಸಲಾಗಿದೆ. ಸ್ನಾನ ಮಾಡಲು ಕೆರೆಯತ್ತ ತೆರಳುತ್ತಿದ್ದ ಸಂದರ್ಭ ಅವರ ಹತ್ಯೆಗೈಯಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆಯಲ್ಲಿ ತಾವು ಭಾಗಿಯಾಗಿದ್ದೇವೆ ಎಂಬ ಆರೋಪವನ್ನು ಸ್ಥಳೀಯ ಬಿಜೆಪಿ ನಾಯಕರು ನಿರಾಕರಿಸಿದ್ದಾರೆ. 

ಸ್ಥಳಕ್ಕೆ ಪೊಲೀಸ್ ತುಕುಡಿ ಧಾವಿಸಿದೆ ಹಾಗೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಶಿವಮಂದಿರದಿಂದ ಹರನಾಮ ಗ್ರಾಮದ ವರೆಗೆ ರಾಮನವಮಿ ಮೆರವಣಿಗೆ ಆರಂಭಿಸಲಾಗಿತ್ತು. ಇದಕ್ಕಿಂತ ಮೊದಲು ಭುಸ್ರಾ ಗ್ರಾಮದ ಮೂಲಕ ಮೆರವಣಿಗೆ ಸಾಗುವ ಬಗ್ಗೆ ಆಯೋಜಕರು ನಿರ್ಧರಿಸಿದ್ದರು. ಆದರೆ, ಸ್ಥಳೀಯ ಪಂಚಾಯತ್ ಪ್ರಧಾನರು ಇದಕ್ಕೆ ಅನುಮತಿ ನೀಡಿರಲಿಲ್ಲ. ಈ ಸಂದರ್ಭ ಮೆರವಣಿಗೆಯಲ್ಲಿ ಇದ್ದ ಕೆಲವರ ಮೋಟಾರ್‌ಸೈಕಲ್‌ಗಳನ್ನು ದಹಿಸಲಾಗಿದೆ ಎಂಬ ಸುದ್ದಿ ಹರಡಿತು. ಇದರಿಂದ ಘರ್ಷಣೆ ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಘರ್ಷಣೆಗೂ ಎಸ್.ಕೆ. ಶಹಾಜಹಾನ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಆದರೆ, ಅವರು ಸ್ನಾನಕ್ಕೆಂದು ಕೆರೆಗೆ ಹೋಗುತ್ತಿರುವಾಗ ಅಪರಿಚಿದ ದುಷ್ಕಮಿಗಳು ಕಬ್ಬಿಣದ ಸಲಾಗೆ ಹಾಗೂ ದೊಣ್ಣೆಯಿಂದ ಅವರ ಮೇಲೆ ದಾಳಿ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಶಹಾಜಹಾನ್ ಮೃತಪಟ್ಟಿದ್ದಾರೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ರಾಜ್ಯ ಮಕ್ಕಳ ಹಕ್ಕುಗಳ ಸಮಿತಿಯ ಆದೇಶವನ್ನು ಧಿಕ್ಕರಿಸಿ ಇಲ್ಲಿ ನಡೆದ  ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಮಕ್ಕಳ ಕೈಯಲ್ಲೂ ಆಯುಧಗಳನ್ನು ನೀಡಲಾಗಿತ್ತು ಎಂದು ಆರೋಪಿಸಲಾಗಿದೆ. ಬಜರಂಗದಳ ಈ  ರ‍್ಯಾಲಿಯನ್ನು ಆಯೋಜಿಸಿತ್ತು. 

"ಪುಲುರಿಯಾದಲ್ಲಿ ನಡೆದ  ರ‍್ಯಾಲಿಯಲ್ಲಿ ಮಕ್ಕಳ ಕೈಗೂ ಆಯುಧಗಳನ್ನು ನೀಡಲಾಗಿತ್ತು ಎನ್ನುವುದು ನಮಗೆ ತಿಳಿದುಬಂದಿದೆ. ಈ ಬಗ್ಗೆ ನಾವು ಸ್ಥಳೀಯಾಡಳಿತ ಹಾಗು ಪೊಲೀಸರೊಂದಿಗೆ ಮಾತನಾಡಿದ್ದೇವೆ" ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅನನ್ಯ ಚಟರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News