ಉತ್ತಮ ನಾಯಕನ ಆಯ್ಕೆ ಆಗದಿದ್ದರೇ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ : ದಲಿತ ಸಮಾವೇಶದಲ್ಲಿ ಕೋದಂಡರಾಮ್

Update: 2018-03-25 18:40 GMT

ಹಾಸನ,ಮಾ.25: ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ನಾಯಕನನ್ನು ಆಯ್ಕೆ ಮಾಡದಿದ್ದರೇ ನಮ್ಮ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ದಲಿತ ಸಮಾವೇಶದಲ್ಲಿ ಅಂಬೇಡ್ಕರ್ ಯುವಸೇನೆ ರಾಜ್ಯಾಧ್ಯಕ್ಷ ಕೋದಂಡರಾಮ್ ಅಭಿಪ್ರಾಯಪಟ್ಟರು.

ತಾಲೂಕಿನ ಸಾಲಗಾಮೆ ಗ್ರಾಮ ಪಮಚಾಯಿತಿ ಆವರಣದಲ್ಲಿ ಅಂಬೇಡ್ಕರ್ ಯುವಸೇನೆ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ದಲಿತ ಸಮಾವೇಶವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ನಂತರ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಪೂರ್ವದಲ್ಲಿ ಕೇವಲ 4830 ಜನರಿಗೆ ಮಾತ್ರ ಮತ ಚಲಾಯಿಸುವ ಹಕ್ಕನ್ನು ಕೊಡಲಾಗಿತ್ತು. ನಂತರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹೋರಾಟ ಹಾಗೂ ಸಂವಿಧಾನದ ಫಲವಾಗಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ಕೊಡಲಾಯಿತು. ಯಾರೇ ಒಬ್ಬ ನಾಯಕನನ್ನು ಆಯ್ಕೆ ಮಾಡಬೇಕಾದರೇ ಆತನು ತಳ ಸಮುದಾಯದ ಹಿನ್ನಲೆಯನ್ನು ತಿಳಿದಿದಿಯೋ ಎಂಬುದನ್ನು ತಿಳಿಯಬೇಕು ಎಂದು ಕಿವಿಮಾತು ಹೇಳಿದರು. ದಲಿತ ಸಮುದಾಯದ ಕಷ್ಟ-ಸುಃಖಕ್ಕೆ ಸ್ಪಂದಿಸುವ ಜನಪ್ರತಿನಿಧಿಯನ್ನು ಆರಿಸುವಂತಹ ಜ್ಞಾನ ಬರಬೇಕು. ಇಲ್ಲವಾದರೇ ನಮ್ಮ ಸಮುದಾಯವು ಅಭಿವೃದ್ಧಿ ಕಾಣಲು ಸಾಧ್ಯವಾಗುವುದಿಲ್ಲ ಎಂದು ಸಲಹೆ ನೀಡಿದರು.

ಸರಕಾರಗಳು ನಮ್ಮ ದಲಿತ ಸಮುದಾಯಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ನೀಡಿದೆ. ಆದರೆ ಅದನ್ನು ತಲುಪಿಸುವ ಕೆಲಸವನ್ನು ನಮ್ಮ ಯುವ ಸಂಘಟನೆಗಳು ಮಾಡಬೇಕು. ಪ್ರತಿ ಗ್ರಾಮಗಳಿಗೂ ಹೋಗಿ ದಲಿತರಿಗೆ ಇರುವ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ಗ್ರಾಮದಿಂದ ತಳಮಟ್ಟದವರೆಗೂ ಸರಕಾರಗಳ ಯೋಜನೆಗಳು ತಲುಪಿದಾಗ ಮಾತ್ರ ಅಂಬೇಡ್ಕರ್ ಅವರ ಸಂವಿಧಾನ ಜಾರಿಗೆ ಬಂದಿದ್ದು ಸಾರ್ಥಕವಾಗುತ್ತದೆ. ಜೊತೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡ ಅರ್ಹರಿಗೆ ಸರಕಾರದ ಯೋಜನೆಯನ್ನು ತಲುಪಿಸದೆ ಕೆಲ ಕುಟುಂಬಗಳ ಪಾಲಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಆರ್ಥಿಕ ಸಬಲಿಕರಣ ಆಗಬೇಕು. ಸಂಘಟನೆಗೆ ಎಲ್ಲಾರು ಒತ್ತು ನೀಡಿ ಸರಕಾರದಿಂದ ಸಿಗುವ ಸೌಲಭ್ಯವನ್ನು ಸದುಪಯೋಗಪಡೆದುಕೊಳ್ಳುವಂತೆ ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತನಾಡಿ, ಯಾವುದೇ ಒಂದು ಸಮುದಾಯ ಮುಂದೆ ಬರಬೇಕಾದರೇ ಸಂಘಟಿತರಾಗುವುದು ಅತಿಮುಖ್ಯವಾಗಿರುತ್ತದೆ. ಬಂಡವಾಳಶಾಹಿಗಳು ಜನಪ್ರತಿನಿಧಿಗಳಾಗಿ ಆಯ್ಕೆಗೊಂಡಾಗ ಇಂತಹ ಸಮುದಾಯಗಳು ಶೋಷಣೆಗೆ ಒಳಗಾಗುತ್ತದೆ. ಪ್ರತಿಯೊಬ್ಬರೂ ಮತದಾನ ಮಾಡಿ ಆದರೇ ಉತ್ತಮ ನಾಯಕನನ್ನು ಆಯ್ಕೆ ಮಾಡಿದಾಗ ಮಾತ್ರ ಅಂಬೇಡ್ಕರ್ ಆಶಯಗಳ ಕನಸ್ಸನ್ನು ನನಸು ಮಾಡಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಯಾವುದೇ ಒಂದು ಸಂಘಟನೆ ಮಾಡುವುದು ಸುಲಭ ಆದರೇ ಅದನ್ನು ಮುಂದುವರೆಸಿಕೊಂಡು ಹೋಗುವುದು ಕಷ್ಟಕರವಾಗಿರುತ್ತದೆ. ಎಲ್ಲಾರ ಸಹಕಾರ ಇದ್ದರೇ ಸಂಘಟನೆ ಮೂಲಕ ವಿವಿಧ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಮೊದಲು ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ತಾಲೂಕಿನ ಸಾಲಗಾಮೆಯಲ್ಲಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಕುಮಾರ್ ಕಟ್ಟೆ ಬೆಳಗುಲಿ ತಂಡದವರಿಂದ ಅಂಬೇಡ್ಕರ್ ಗೀತೆ, ಭೀಮಗೀತೆ ಹಾಡಲಾಯಿತು.

ಈ ಸಂದರ್ಭದಲ್ಲಿ ಮಾಸ್ಟರ್ ಹಿರಿಯ ಮುಖಂಡ ಕೇಶವಯ್ಯ, ಕೆ.ವೈ.ಡಿ.ಎಸ್. ಜಿಲ್ಲಾಧ್ಯಕ್ಷ ಕ್ರಾಂತಿ ತ್ಯಾಗಿ ಪ್ರಸಾದ್, ಅಂಬೇಡ್ಕರ್ ಯುವಸೇನೆ ಗೌರವಾಧ್ಯಕ್ಷ ಜಿ.ಓ. ಮಹಾಂತಪ್ಪ, ಜಿಲ್ಲಾಧ್ಯಕ್ಷ ಕೆ. ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ, ಸಮತಾ ಸೈನಿಕ ದಳ ಅಧ್ಯಕ್ಷ ಆರ್.ಪಿ.ಐ. ಸತೀಶ್, ದಲಿತ ಮಾನವ ಹಕ್ಕುಗಳ ರಾಜ್ಯ ಸಂಚಾಲಕ ಮರಿಜೋಸೇಫ್, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಮಲ್ಲೇಶ್ ಅಂಬುಗ, ಜಗದೀಶ್ ಚೌಡಹಳ್ಳಿ, ಮಹಿಳಾ ಘಟಕ ಅಧ್ಯಕ್ಷೆ ಅನ್ನಪೂರ್ಣ, ಶೋಭ, ವರ್ಷಾ ಹಾಸನ್, ಹಿರಿಯ ಜಾನಪದ ಕಲಾವಿಧ ಗ್ಯಾರಂಟಿರಾಮಣ್ಣ, ಮಧು, ಕೇಶವ, ಸ್ಟೀವನ್ ಪ್ರಕಾಶ್, ನವೀನ್, ಚಂದ್ರಶೇಖರ್ ಇತರರು ಪಾಲ್ಗೊಂಡಿದ್ದರು. ಅಂಬೇಡ್ಕರ್ ಯುವಸೇನೆ ಜಿಲ್ಲಾ ಸಂಚಾಲಕ ಕೆ.ಎಸ್. ಗುರುರಾಜು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News