ಹಿರಿಯ ರಾಜಕಾರಣಿ ಎಂ.ಸಿ.ನಾಣಯ್ಯ ಕಾಂಗ್ರೆಸ್ ಸೇರ್ಪಡೆ ಸ್ವಾಗತಾರ್ಹ: ಟಿ.ಪಿ.ರಮೇಶ್

Update: 2018-03-26 11:08 GMT

ಮಡಿಕೇರಿ, ಮಾ.26: ಹಿರಿಯ ರಾಜಕಾರಣಿ ಮೇರಿಯಂಡ ಚಂಗಪ್ಪ ನಾಣಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದನ್ನು ಅವರ ಶಿಷ್ಯನಾಗಿ ತುಂಬು ಹೃದಯದಿಂದ ಸ್ವಾಗತಿಸುವುದಾಗಿ ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿಯ ಅಧ್ಯಕ್ಷರಾದ ಟಿ.ಪಿ.ರಮೇಶ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ 5 ದಶಕಗಳಿಂದ ಕೊಡಗು ಜಿಲ್ಲೆಯ ಮತ್ತು ಕರ್ನಾಟಕ ರಾಜ್ಯದ ಸಹಕಾರಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿರುವ ಎಂ.ಸಿ.ನಾಣಯ್ಯರವರು ಮಡಿಕೇರಿ ಕ್ಷೇತ್ರದಿಂದ 1978 ರಲ್ಲಿ ಇಂದಿರಾ ಕಾಂಗ್ರೆಸ್ ಮೂಲಕ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ದೀರ್ಘಕಾಲ ಕಾಂಗ್ರೆಸ್ ಸದಸ್ಯರಾಗಿ 3 ಬಾರೀ ಸಚಿವರಾಗಿ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿರುವ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಅತೀವ ಹರ್ಷ ತಂದಿದೆ ಎಂದು ತಿಳಿಸಿದ್ದಾರೆ.

ಕೋಮುವಾದಿ ಶಕ್ತಿಗಳ ವಿರುದ್ಧ ಜಾತ್ಯತೀತ ನಿಲುವಿನ ಶಕ್ತಿಗಳು ಕಾಂಗ್ರೆಸ್ ನೊಂದಿಗೆ ಕೈಜೋಡಿಸಿ ಹೋರಾಡಬೇಕಾದ ಅನಿವಾರ್ಯತೆ ಇಂದು ರಾಷ್ಟ್ರಕ್ಕೆ ಬಂದೊದಗಿದೆ. ಜಾತ್ಯಾತೀತ ಮತಗಳು ಹರಿದು ಹೊಗದಂತೆ ರಾಜ್ಯ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್‍ನ 7 ಮಂದಿ ಶಾಸಕರೊಂದಿಗೆ ಹಿರಿಯ ರಾಜಕಾರಣಿ ಎಂ.ಸಿ.ನಾಣಯ್ಯ ಅವರು ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಕೊಡಗು ಕಾಂಗ್ರೆಸ್ ಸಮಿತಿಗೆ ಹೆಚ್ಚಿನ ಬಲ ಬಂದಂತಾಗಿದೆ ಎಂದು ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

1978 ರಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದಿಂದ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ವಿಧಾನಸಭೆ ಪ್ರವೇಶಿಸಿದ ಎಂ.ಸಿ.ನಾಣಯ್ಯ ಅವರು ಮುಖ್ಯಮಂತ್ರಿ ದಿ. ದೇವರಾಜು ಅರಸರ ಮಂತ್ರಿ ಮಂಡಲದಲ್ಲಿ ರಾಜ್ಯ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರದ ದಿನಗಳಲ್ಲಿ ಕ್ರಾಂತಿರಂಗ, ಜನತಾ ಪಾರ್ಟಿ, ಜನತಾದಳ ಸರಕಾರದಲ್ಲಿ ಶಾಸಕರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಹೆಚ್.ಡಿ. ದೇವೆಗೌಡ, ಜೆ.ಹೆಚ್.ಪಟೇಲರೊಂದಿಗೆ ಕಾರ್ಯನಿರ್ವಹಿಸಿದ ಹಿರಿತನ ಇವರಿಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸ್ನೇಹಿತರಾಗಿರುವ ಎಂ.ಸಿ.ನಾಣಯ್ಯ ಹಾಗೂ ಅವರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ರಮೇಶ್ ಇದೇ ಸಂದರ್ಭ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News