ದುಡ್ಡಿಗಾಗಿ ಆಧ್ಯಾತ್ಮದ ಹೆಸರಲ್ಲಿ ಹಿಂದುತ್ವ ಹರಡಲು ಭಾರತೀಯ ಮಾಧ್ಯಮಗಳು ಸಿದ್ಧ!

Update: 2018-03-26 17:39 GMT

ಭಾರತದ ಪ್ರತಿಷ್ಠಿತ ಸುದ್ದಿಸಂಸ್ಥೆಗಳು ಹಣದಾಸೆಗಾಗಿ ಹಿಂದುತ್ವವನ್ನು ಉತ್ತೇಜಿಸಲು ಸಿದ್ಧವಿರುವುದು ಮಾತ್ರವಲ್ಲ, ಅದಕ್ಕಾಗಿ ಕಪ್ಪುಹಣವನ್ನು ಪಡೆಯಲು ಕೂಡಾ ಹೇಸುವುದಿಲ್ಲವೆಂಬುದನ್ನು ಸುದ್ದಿ ಜಾಲತಾಣ ‘ಕೋಬ್ರಾ ಪೋಸ್ಟ್’ ನಡೆಸಿದ ‘ಆಪರೇಶನ್ 136’ ಕುಟುಕು ಕಾರ್ಯಾಚರಣೆ (ಸ್ಟಿಂಗ್ ಅಪರೇಶನ್) ಬಯಲಿಗೆಳೆದಿದೆ. 'ಕೋಬ್ರಾ ಪೋಸ್ಟ್' ಕುಟುಕು ಕಾರ್ಯಾಚರಣೆಯ 1ನೆ ಭಾಗ ಇದಾಗಿದ್ದು, 2ನೆ ಭಾಗ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಹಿಂದುತ್ವವನ್ನು ವಿರೋಧಿಸುವ ಸುದ್ದಿಗಳನ್ನು ಮೂಲೆಗುಂಪು ಮಾಡುವ ಹಾಗೂ ಪ್ರತಿಪಕ್ಷಗಳನ್ನು ಮಾತ್ರವಲ್ಲದೆ ಕೆಲವು ನಿರ್ದಿಷ್ಟ ಎನ್‌ಡಿಎ ನಾಯಕರನ್ನು ಕೂಡಾ ನಿಂದಿಸುವಂತಹ ಸುದ್ದಿಗಳನ್ನು ಪ್ರಸಾರ ಮಾಡಲು,ಕೆಲವು ಮಾಧ್ಯಮ ಸಂಸ್ಥೆಗಳ ಕಾರ್ಯನಿರ್ವಾಹಕರು ಸಮ್ಮತಿಸಿರುವುದನ್ನು ಈ ಕುಟುಕು ಕಾರ್ಯಾಚರಣೆ ತೋರಿಸಿಕೊಟ್ಟಿದೆ.

 ಹಣಕ್ಕೆ ಪ್ರತಿಯಾಗಿ ಕೇಸರಿ ಪಕ್ಷದ ಪರ ರಾಜಕೀಯ ಅಭಿಯಾನಗಳನ್ನು ನಡೆಸಲು, ಅಧ್ಯಾತ್ಮಿಕತೆ ಹಾಗೂ ಧಾರ್ಮಿಕ ಸುದ್ದಿಗಳಿಗೂ ರಾಜಕೀಯ ಥಳುಕು ಹಾಕಲು ಮತ್ತು ಚುನಾವಣಾ ಲಾಭಕ್ಕಾಗಿ ‘ಮೃದು ಹಿಂದುತ್ವ’ ಕಾರ್ಯಸೂಚಿಯನ್ನು ಉತ್ತೇಜಿಸಲು ಈ ಮಾಧ್ಯಮಸಂಸ್ಥೆಗಳು ಕುಟುಕುಕಾರ್ಯಾಚರಣೆಯಲ್ಲಿ ಒಪ್ಪಿಕೊಂಡಿದ್ದವು.

ಸೋಮವಾರ ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಿದೆ. ತನ್ನ ಈ ಸ್ಟಿಂಗ್ ಅಪರೇಶನ್‌ನ ವಿಡಿಯೋಗಳನ್ನು ಕೂಡಾ ಪತ್ರಿಕಾಗೋಷ್ಟಿಯಲ್ಲಿ ಪ್ರದರ್ಶಿಸಿದೆ. ಇದು ತನ್ನ ಸ್ಟಿಂಗ್ ಅಪರೇಶನ್‌ನ ಮೊದಲ ಭಾಗವಾಗಿದ್ದು, ಎರಡನೆ ಭಾಗವನ್ನು ಸದ್ಯದಲ್ಲೇ ಬಹಿರಂಗಪಡಿಸುವುದಾಗಿ ಅದು ಹೇಳಿದೆ. ತನ್ನ ಕುಟುಕು ಕಾರ್ಯಾಚರಣೆಯ ಹಲವಾರು ಕ್ಲಿಪ್‌ಗಳನ್ನು ಕೋಬ್ರಾಪೋಸ್ಟ್ ಯೂಟ್ಯೂಬ್‌ನಲ್ಲಿ ಪ್ರಕಟಿಸಿದೆ.

ಕೋಬ್ರಾಪೋಸ್ಟ್‌ನ ಮಾರುವೇಷದ ವರದಿಗಾರ ಪುಷ್ಪ್ ಶರ್ಮಾ ಅವರು ತನ್ನನ್ನು ‘ಭಗವದ್ಗೀತಾ ಪ್ರಚಾರ ಸಮಿತಿ’ಯ ಪ್ರತಿನಿಧಿಯೆಂದು ಪರಿಚಯಿಸಿಕೊಂಡು, ಸುಮಾರು 20 ಮಾಧ್ಯಮಸಂಸ್ಥೆಗಳ ಮಾಲಕರು ಹಾಗೂ ಮ್ಯಾನೇಜರ್‌ಗಳನ್ನು ಸಂಪರ್ಕಿಸಿದ್ದರು.

ಈ ಕುಟುಕು ಕಾರ್ಯಾಚರಣೆಯ ವಿಡಿಯೋದಲ್ಲಿ, ಮಾಧ್ಯಮಸಂಸ್ಥೆಯೊಂದರ ಕಾರ್ಯನಿರ್ವಾಹಕರೊಬ್ಬರು, ಮಾರುವೇಷದ ವರದಿಗಾರ ಪುಷ್ಪ್‌ಶರ್ಮಾ ಅವರೊಂದಿಗೆ, ‘‘ಹಿಂದುತ್ವವನ್ನು ವಿರೋಧಿಸುವ ಸುದ್ದಿಗಳನ್ನು ಪ್ರಸಾರ ಮಾಡದೆ ಇರಲು, ಸಮಾಜವಾದಿ ಪಕ್ಷ, ಬಿಎಸ್‌ಪಿ ಹಾಗೂ ರಾಷ್ಟ್ರೀಯ ಜನತಾದಳದಂತಹ ರಾಜಕೀಯ ಪಕ್ಷಗಳನ್ನು ಕ್ಷುಲ್ಲಕಗೊಳಿಸುವ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಯವರಂತಹ ನಾಯಕರ ವರ್ಚಸ್ಸಿಗೆ ಕಳಂಕತರುವಂತಹ ಸುದ್ದಿಗಳನ್ನು ಪ್ರಕಟಿಸಲು ತಮಗೆ ಯಾವುದೇ ತೊಂದರೆ ಇಲ್ಲ’’ ಎಂದು ಹೇಳಿರುವುದು ಕೂಡಾ ದಾಖಲಾಗಿದೆ.

 ಕುಟುಕುಕಾರ್ಯಾಚರಣೆಯ ಸಂದರ್ಭದಲ್ಲಿ ಶರ್ಮಾ ಅವರು 20ಕ್ಕೂ ಅಧಿಕ ಮಾಧ್ಯಮಸಂಸ್ಥೆಗಳ ಮಾಲಕರು ಅಥವಾ ಮ್ಯಾನೇಜರ್‌ಗಳನ್ನು ಭೇಟಿಯಾಗಿದ್ದರು. ಕೇಸರಿ ಪಕ್ಷದ ಪರ ಮಾಧ್ಯಮಗಳಲ್ಲಿ ವೇದಿಕೆಯನ್ನು ಕಲ್ಪಿಸಲು ಒಪ್ಪಿಕೊಂಡಲ್ಲಿ 6 ಕೋಟಿ ರೂ.ಗಳಿಂದ 50 ಕೋಟಿ ರೂ.ವರೆಗೆ ಹಣ ನೀಡುವುದಾಗಿ ಶರ್ಮಾ ‘ಆಮಿಷ’ ಒಡ್ಡಿದ್ದರು.

 ಬಹುತೇಕ ಮಾಧ್ಯಮಪ್ರತಿನಿಧಿಗಳು, ಶೇ.50ರಷ್ಟು ಹಣವನ್ನು ನಗದುರೂಪದಲ್ಲಿ ಸ್ವೀಕರಿಸುವುದಕ್ಕೆ ತಮಗೆ ಯಾವುದೇ ಅಭ್ಯಂತರವಿಲ್ಲವೆಂದು ತಿಳಿಸಿದ್ದರು. ಆದರೆ ಹಣವನ್ನು ಮುಂಗಡವಾಗಿ ಪಾವತಿಸಬೇಕು ಮತ್ತು ಉಳಿದ ಹಣವನ್ನು ದೇಣಿಗೆಯ ರೂಪದಲ್ಲಿ ನೀಡಬೇಕೆಂದು ಅವರು ಹೇಳಿದ್ದರು. ಹೀಗೆ ನಗದು ಹಣವನ್ನು ಸ್ವೀಕರಿಸುವುದಾಗಿ ಹೇಳುವ ಮೂಲಕ ಈ ಮಾಧ್ಯಮಸಂಸ್ಥೆಗಳು ಕಪ್ಪುಹಣದ ವ್ಯವಹಾರಕ್ಕೂ ಸಿದ್ಧವಿರುವುದು ಬಹಿರಂಗಗೊಂಡಿದೆ.

 ಹಿಂದುತ್ವವನ್ನು ಉತ್ತೇಜಿಸುವ ವರದಿಗಳನ್ನು ಪ್ರಸಾರ ಮಾಡಲು ‘ಚತುರ ಮಾರ್ಗಗಳೂ ಇವೆ, ಮೂರ್ಖತನದ ಮಾರ್ಗಗಳೂ ಇವೆ’ ಎಂದು ಮಾಧ್ಯಮಸಂಸ್ಥೆಯೊಂದರ ಮ್ಯಾನೇಜರ್ ಒಬ್ಬಾತ ಕುಟುಕುಕಾರ್ಯಾಚರಣೆಯಲ್ಲಿ ಹೇಳಿಕೊಂಡಿದ್ದಾರೆ. ಆದರೆ ತಾನು ಅದನ್ನು ಅತ್ಯಂತ ಸ್ಮಾರ್ಟ್ ಆದ ವಿಧಾನದಲ್ಲಿ ಮಾಡುವ ಕೊಡುಗೆಯನ್ನು ಅವರು ನೀಡಿದ್ದರು. ಇಂಡಿಯಾ ಟಿವಿ, ದೈನಿಕ್ ಜಾಗರಣ್, ಹಿಂದಿ ಖಬರ್, ಸಬ್ ಟಿವಿ, ಡಿಎನ್‌ಎ, ಅಮರ್ ಉಜಾಲ, ಯುಎನ್‌ಐ, 9ಎಕ್ಸ್ ಟಶಾನ್, ಸಮಾಚಾರ್ ಪ್ಲಸ್, ಎಚ್‌ಎನ್‌ಎನ್*7, ಪಂಜಾಬ್ ಕೇಸರಿ, ಸ್ವತಂತ್ರ ಭಾರತ್, ಸ್ಕೂಪ್‌ವೂಪ್, ರೆಡಿಫ್ .ಕಾಮ್, ಇಂಡಿಯಾ ವಾಚ್, ಆಜ್ ಹಾಗೂ ಸಾಧನಾ ಪ್ರೈಮ್‌ನ್ಯೂಸ್ ಮತ್ತಿತರ ಸುದ್ದಿಸಂಸ್ಥೆಗಳಲ್ಲಿ ಕುಟುಕು ಕಾರ್ಯಾಚರಣೆ ನಡೆಸಲಾಗಿತ್ತು.

  ಮುದ್ರಣ, ಇಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಮಾಧ್ಯಮಗಳು, ಇ-ನ್ಯೂಸ್ ಪೋರ್ಟಲ್‌ಗಳು, ಇ-ಪೇಪರ್ ಹಾಗೂ ಫೇಸ್‌ಬುಕ್,ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳು ಹೀಗೆ ಬಹುತೇಕ ಎಲ್ಲಾ ಮಾಧ್ಯಮಗಳು ಹಣಕ್ಕಾಗಿ ಹಿಂದುತ್ವದ ಪರ ಅಭಿಯಾನವನ್ನು ನಡೆಸಲು ಸಮ್ಮತಿಸಿದ್ದವು.

 ಹೊಸದಿಲ್ಲಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಕುಟುಕುಕಾರ್ಯಾಚರಣೆಯ ವಿಡಿಯೋಗಳನ್ನು ಪ್ರದರ್ಶನ ಮಾಡಿದ ಸಂದರ್ಭದಲ್ಲಿ ಕೋಬ್ರಾಪೋಸ್ಟ್ ಸಂಪಾದಕ ಅನಿರುದ್ಧ ಬಹಾಲ್, ಸಾಮಾಜಿಕ ಕಾರ್ಯಕರ್ತ, ನ್ಯಾಯವಾದಿ ಪ್ರಶಾಂತ್ ಭೂಷಣ್ ಹಾಗೂ ಹಿರಿಯ ಪತ್ರಕರ್ತರಾದ ಸಿದ್ಧಾರ್ಥ ವರದರಾಜನ್ ಹಾಗೂ ಪರಾಂಜಯ ಗುಜಾ ಥಕುರ್ತಾ ಉಪಸ್ಥಿತರಿದ್ದರು.

 ಕುಟುಕು ಕಾರ್ಯಾಚರಣೆಯಲ್ಲಿ 6ರಿಂದ 50 ಕೋಟಿ ರೂ.ವರೆಗಿನ ಹಣ ಪಾವತಿಸಿದಲ್ಲಿ ಈ ಮಾಧ್ಯಮಸಂಸ್ಥೆಗಳು ಏನೆಲ್ಲಾ ಮಾಡಲು ಸಿದ್ದವಿದ್ದಾವೆಂಬ ಎಂಬ ಬಗ್ಗೆ ವಿವರಗಳನ್ನು ಕೋಬ್ರಾಪೋಸ್ಟ್ ಹೀಗೆ ಪಟ್ಟಿ ಮಾಡಿದೆ.

1.ಅಧ್ಯಾತ್ಮಿಕತೆ ಹಾಗೂ ಧಾರ್ಮಿಕ ಸಂವಾದದ ಹೆಸರಿನಲ್ಲಿ ಹಿಂದುತ್ವವನ್ನು ಉತ್ತೇಜಿಸುವುದು.

2. ಕೋಮುಆಧಾರದಲ್ಲಿ ಮತದಾರರನ್ನು ಧ್ರುವೀಕರಿಸಲು ಸಾಧ್ಯವಾಗುವಂತಹ ವಿಷಯಗಳನ್ನು ಪ್ರಸಾರ ಮಾಡುವುದು.

3. ಅಧಿಕಾರರೂಢ ಪಕ್ಷದ ರಾಜಕೀಯ ಎದುರಾಳಿಗಳಿಗೆ ಕಳಂಕ ತರಲು ಅಥವಾ ಮೂಲೆಗುಂಪು ಮಾಡುವುದಕ್ಕಾಗಿ ಅವರ ವಿರುದ್ಧ ಮಾನಹಾನಿಕರ ವಿಷಯಗಳನ್ನು ಪ್ರಕಟಿಸುವುದು.

4. ಇನ್ನು ಕೆಲವರು ಅಧಿಕಾರದಲ್ಲಿರುವ ಪಕ್ಷದ ಪರವಾಗಿ ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸುವುದು.

5. ಅವರಲ್ಲಿ ಅನೇಕರು ಈ ಉದ್ದೇಶಕ್ಕಾಗಿಯೇ ಜಾಹೀರಾತು ಸುದ್ದಿಗಳನ್ನು ಸೃಷ್ಟಿಸಿ, ಪ್ರಕಟಿಸುವುದು.

6. ತಮ್ಮ ಸಂಸ್ಥೆಗಳು ಮಾತ್ರವಲ್ಲದೆ ಇತರ ಪ್ರಕಟಣಾ ಸಂಸ್ಥೆಗಳ ಪತ್ರಕರ್ತರ ನೆರವು ಕೂಡಾ ಪಡೆದು ಇತರ ಮಾಧ್ಯಮಗಳಲ್ಲಿಯೂ ಅಧಿಕಾರದಲ್ಲಿರುವ ಪಕ್ಷದ ಪರವಾಗಿ ಪೋಣಿಸಿದ ವರದಿಗಳನ್ನು ಪ್ರಕಟಿಸುವ ಕೊಡುಗೆಯನ್ನು ನೀಡಿದ್ದರು.

7. ಕೇಂದ್ರ ಸಚಿವರಾದ ಅರುಣ್‌ಜೇಟ್ಲಿ, ಮನೋಜ್ ಸಿನ್ಹಾ, ಜಯಂತ್ ಸಿನ್ಹಾ, ಮೇನಕಾ ಗಾಂಧಿ ಹಾಗೂ ಅವರ ಪುತ್ರ ವರುಣ್ ಗಾಂಧಿ ಅವರನ್ನು ಟೀಕಿಸುವಂತಹ ವರದಿಗಳನ್ನು ಪ್ರಸಾರ ಮಾಡುವುದು.

8. ಇನ್ನು ಕೆಲವರು ಬಿಜೆಪಿಯ ಪಾಲುದಾರ ಪಕ್ಷಗಳ ನಾಯಕರಾದ ಅನುಪ್ರಿಯಾ ಪಟೇಲ್, ಓಂಪ್ರಕಾಶ್ ರಾಜ್‌ಭರ್ ಹಾಗೂ ಉಪೇಂದ್ರ ಕುಶವಾಹ ವಿರುದ್ಧ ಕಪೋಲ್ಪಕಲ್ಪಿತ ವರದಿಗಳನ್ನು ಪ್ರಕಟಿಸುವುದು.

9. ಪ್ರಶಾಂತ್ ಭೂಷಣ್, ದುಶ್ಯಂತ್ ದವೆ, ಕಾಮಿನಿ ಜೈಸ್ವಾಲ್ ಆಹೂಗ ಇಂದಿರಾ ಜೈಸಿಂಗ್ ಅವರಂತಹ ಖ್ಯಾತ ಸಾಮಾಜಿಕ ಹೋರಾಟಗಾರರು ಹಾಗೂ ಕಾನೂನುತಜ್ಞರಿಗೆ ಕಳಂಕ ತರುವಂತಹ ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವುದು.

10. ರೈತರ ಹಕ್ಕುಗಳ ಪರವಾಗಿ ಹೋರಾಟ ನಡೆಸುವವರಿಗೆ ಮಾವೋವಾದಿಗಳೆಂದು ಹಣೆಪಟ್ಟಿ ಕಟ್ಟುವುದು.

11. ರಾಹುಲ್ ಗಾಂಧಿಯವರಂತಹ ನಾಯಕರ ತೇಜೋವಧೆ ಮಾಡುವಂತಹ ವಿಷಯಗಳನ್ನು ಸೃಷ್ಟಿಸಲು ಹಾಗೂ ಉತ್ತೇಜಿಸುವುದು.

12. ಕುಟುಕು ಕಾರ್ಯಾಚರಣೆ ನಡೆಸಿದ ಪತ್ರಕರ್ತ ಪುಷ್ಪ್ ಶರ್ಮಾ ಭೇಟಿಯಾದ ಕೆಲವು ಮಾಧ್ಯಮಸಂಸ್ಥೆಗಳ ಮಾಲಕರು ಅಥವಾ ಪ್ರಮುಖ ಅಧಿಕಾರಿಗೆಳು ತಮಗೆ ಆರೆಸ್ಸೆಸ್ ಜೊತೆ ನಂಟಿರುವುದನ್ನು ಒಪ್ಪಿಕೊಂಡಿದ್ದರು ಹಾಗೂ ತಾವು ಹಿಂದುತ್ವವಾದದ ಪರವಾಗಿದ್ದು, ಈ ಅಭಿಯಾನದ ಪರವಾಗಿ ಕೆಲಸ ಮಾಡಲು ಸಂತಸವಾಗುತ್ತಿದೆಯೆಂದು ಹೇಳಿಕೊಂಡಿದ್ದರು.

ಆಪರೇಷನ್ 136
2017ರ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದ ಪ್ರಕಾರ ಭಾರತ  136 ನೇ ಸ್ಥಾನದಲ್ಲಿದೆ. ಆ ನೆನಪಿಗಾಗಿ ಕೋಬ್ರಾ ಪೋಸ್ಟ್  ತನ್ನ ಕುಟುಕು ಕಾರ್ಯಾಚರಣೆಗೆ ಆಪರೇಷನ್ 136 ಎಂದು ಹೆಸರಿಟ್ಟಿದೆ. 
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News