ಅತ್ಯಾಚಾರಿಯಿಂದ ತಪ್ಪಿಸಿಕೊಳ್ಳಲು ಬಾಲಕಿ ಮಾಡಿದ್ದೇನು ಗೊತ್ತೇ ?

Update: 2018-03-27 03:34 GMT

ಮುಂಬೈ, ಮಾ. 27: ಆಟೊ ಚಾಲಕನೋರ್ವ 16 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ನಗರದ ಮಹಾಪೆ ಎಂಐಡಿಸಿ ಪ್ರದೇಶದಲ್ಲಿ ನಡೆದಿದೆ.

ದಿಘಾ ಮೂಲದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಚಾಲಕ ಆಕೆಯನ್ನು ಆಟೊದಲ್ಲಿ ಬೇರೆಡೆಗೆ ಕರೆದೊಯ್ಯುತ್ತಿದ್ದಾಗ ಸಾಹಸದಿಂದ ಬಾಲಕಿ ವೇಗವಾಗಿ ಚಲಿಸುತ್ತಿದ್ದ ಆಟೊದಿಂದ ಧುಮುಕಿದಳು. ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಪ್ರಜ್ಞೆ ಬಂದ ಬಳಿಕ ಆಕೆ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾಳೆ.

ಅನಾಥೆ ಬಾಲಕಿ ದಿಘಾ ಎಂಬಲ್ಲಿ ಅಜ್ಜಿಯ ಜತೆ ವಾಸವಿದ್ದಳು. ಶಾಲಾ ಶಿಕ್ಷಣ ಮುಗಿಸಿದ ಬಳಿಕ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಘಟನೆಯ ಮುನ್ನಾದಿನ ಬಾಲಕಿ ಕಂಪನಿಯಿಂದ ಆಟೊದಲ್ಲಿ ಮನೆಗೆ ಬಂದಿದ್ದಳು. ಆಕೆ ಬರುವ ಸಮಯ ತಿಳಿದುಕೊಂಡ ಆಟೊ ಚಾಲಕ ಮರುದಿನ ಈ ಕೃತ್ಯ ಎಸಗಲು ಸಂಚು ರೂಪಿಸಿದ ಎಂದು ಪೊಲೀಸರು ವಿವರಿಸಿದ್ದಾರೆ. ಶುಕ್ರವಾರ ಸಂಜೆ 7ರ ಸುಮಾರಿಗೆ ಆಟೊ ಚಾಲಕ ಬಾಲಕಿಯನ್ನು ಮನೆಗೆ ಬಿಡಬೇಕೇ ಎಂದು ಕೇಳಿದ್ದಾನೆ. ಒಪ್ಪಿಕೊಂಡ ಆಕೆ ಆಟೊ ಹತ್ತಿದ್ದಾಳೆ. ಚಾಲಕ ಎಐಡಿಸಿ ಅರಣ್ಯ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಹಾಗೂ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ.

ಬಳಿಕ ಮನೆಗೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದ. ಆದರೆ ಆತನ ವರ್ತನೆ ನೋಡಿ, ತನ್ನನ್ನು ಕೊಲ್ಲಲು ಮುಂದಾಗಿದ್ದಾನೆ ಎಂದು ತಿಳಿದುಕೊಂಡ ಬಾಲಕಿ, ಸಿಗ್ನಲ್ ಬಳಿ ಆಟೊ ಯು-ಟರ್ನ್ ತೆಗೆದುಕೊಳ್ಳುವ ವೇಳೆ ಹಾರಿದ್ದಾಳೆ. ಚಾಲಕ ಪರಾರಿಯಾಗಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News