ಬಿಜೆಪಿ 'ಸೂಪರ್ ಇಲೆಕ್ಷನ್ ಕಮಿಷನ್' : ಕಾಂಗ್ರೆಸ್ ಲೇವಡಿ

Update: 2018-03-27 12:37 GMT
ರಣದೀಪ್ ಸುರ್ಜೆವಾಲ

ಹೊಸದಿಲ್ಲಿ,ಮಾ.27 :  ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಿಸುವ ಮುನ್ನವೇ ದಿನಾಂಕವನ್ನು ಟ್ವೀಟ್ ಮಾಡಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವಿಯ ವಿವಾದಕ್ಕೀಡಾಗಿರುವಂತೆಯೇ  ಕಾಂಗ್ರೆಸ್ ಪಕ್ಷ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು  ಬಿಜೆಪಿಯನ್ನು 'ಸೂಪರ್ ಇಲೆಕ್ಷನ್ ಕಮಿಷನ್' ಎಂದು ಲೇವಡಿಗೈದಿದೆ.

ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನೂ ಪ್ರಶ್ನಿಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ, ಮಾಲವಿಯ ಅಥವಾ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಆಯೋಗ ಕ್ರಮ ಕೈಗೊಳ್ಳುವುದೇ ಎಂದು ಪ್ರಶ್ನಿಸಿದ್ದಾರೆ.

"ಬಿಜೆಪಿ ಸೂಪರ್ ಚುನಾವಣಾ ಆಯೋಗವಾಗಿ ಬಿಟ್ಟಿದೆ, ಅದು ಆಯೋಗಕ್ಕಿಂತಲೂ ಮುಂಚಿತವಾಗಿ ಚುನಾವಣಾ ದಿನಾಂಕ ಘೋಷಿಸಿದೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ  ಆಯೋಗ ನೋಟಿಸ್ ಜಾರಿಗೊಳಿಸುವುದೇ  ಹಾಗೂ ಐಟಿ ಸೆಲ್ ಮುಖ್ಯಸ್ಥ ಮಾಲವಿಯ ವಿರುದ್ಧ  ಆಯೋಗದ ಗೌಪ್ಯ ಮಾಹಿತಿ ಸೋರಿಕೆ ಮಾಡಿದ್ದಕ್ಕೆ  ಎಫ್‍ಐಆರ್ ದಾಖಲಿಸುವುದೇ?,'' ಎಂದು ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. "ಎಲ್ಲಾ ಸಂಸ್ಥೆಗಳನ್ನೂ ನಾಶಗೈಯ್ಯಲಾಗುತ್ತಿದೆ. ಚುನಾವಣಾ  ಆಯೋಗಕ್ಕಿಂತ ಮುಂಚಿತವಾಗಿ ರಾಜಕೀಯ ಪಕ್ಷವೊಂದು ಚುನಾವಣಾ ದಿನಾಂಕವನ್ನು ಹೇಗೆ ಘೋಷಿಸಲು ಸಾಧ್ಯ?,'' ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News