ವಿವಾಹದಲ್ಲಿ ‘ಖಾಪ್ ಪಂಚಾಯತ್’ ಮಧ್ಯಪ್ರವೇಶ ಸಂಪೂರ್ಣ ಕಾನೂನು ಬಾಹಿರ: ಸುಪ್ರೀಂ ಕೋರ್ಟ್

Update: 2018-03-27 14:21 GMT

ಹೊಸದಿಲ್ಲಿ, ಮಾ. 27: ಅಂತರ್‌ಧರ್ಮ ಅಥವಾ ಅಂತರ್ ಜಾತಿಯ ವಯಸ್ಕ ಪ್ರೇಮಿಗಳ ವಿವಾಹದಲ್ಲಿ ಖಾಪ್ ಪಂಚಾಯತ್‌ನಂತಹ ಕಾನೂನುಬಾಹಿರ ಸಭೆಗಳು ಮಧ್ಯಪ್ರವೇಶಿಸುವುದನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಿಷೇಧಿಸಿದೆ ಹಾಗೂ ಅಂತಹ ಮಧ್ಯಪ್ರವೇಶವನ್ನು ‘ಸಂಪೂರ್ಣ ಅಕ್ರಮ’ ಎಂದು ವ್ಯಾಖ್ಯಾನಿಸಿದೆ. ಇದರಿಂದ ತಮ್ಮ ಸಂಬಂಧದದ ಕಾರಣಕ್ಕೆ ಜೀವ ಬೆದರಿಕೆ ಎದುರಿಸುತ್ತಿರುವ ಪ್ರೇಮಿಗಳು ನಿರಾಳರಾಗಿದ್ದಾರೆ.

  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಕಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಇಂತಹ ಮಧ್ಯಪ್ರವೇಶ ತಡೆಯಲು ಮಾರ್ಗ ಸೂಚಿಗಳನ್ನು ರೂಪಿಸಿದೆ ಹಾಗೂ ಸಂಸತ್ತು ಸೂಕ್ತ ಕಾನೂನು ರೂಪಿಸುವ ವರೆಗೆ ಈ ಮಾರ್ಗ ಸೂಚಿಗಳು ಅಸ್ತಿತ್ವದಲ್ಲಿ ಇರಲಿವೆ ಎಂದು ಹೇಳಿದೆ. ಮರ್ಯಾದೆ ಹತ್ಯೆಗೆ ಒಳಗಾಗುವ ದಂಪತಿಗೆ ರಕ್ಷಣೆ ನೀಡುವಂತೆ ಸರಕಾರೇತರ ಸಂಸ್ಥೆ ಶಕ್ತಿ ವಾಹಿನಿ 2010ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ತೀರ್ಪು ಹೊರಬಿದ್ದಿದೆ.

 ಈ ವರ್ಷ ಮಾರ್ಚ್‌ಗೆ ತೀರ್ಪು ಕಾದಿರಿಸಿದ್ದ ಸುಪ್ರೀಂ ಕೋರ್ಟ್, ಇಬ್ಬರು ವಯಸ್ಕರು ತಮ್ಮ ಹಿನ್ನೆಲೆ ಗಮನಕ್ಕೆ ತೆಗೆದುಕೊಳ್ಳದೆ ಸಮ್ಮತಿಯೊಂದಿಗೆ ವಿವಾಹವಾದಲ್ಲಿ ಸಂಬಂಧಿಕರಾಗಲಿ, ಮೂರನೇ ವ್ಯಕ್ತಿಯಾಗಲಿ ಮಧ್ಯೆ ಪ್ರವೇಶಿಸುವಂತಿಲ್ಲ ಹಾಗೂ ಅವರಿಗೆ ಬೆದರಿಕೆ ಹಾಗೂ ಹಲ್ಲೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣದ ವಿಚಾರಣೆ ಸಂದರ್ಭ ಕೇಂದ್ರ ಸರಕಾರ, ಅಂತರ್ ಧರ್ಮ ಹಾಗೂ ಅಂತರ್ ಜಾತಿ ವಿವಾಹವಾಗಿ ಜೀವ ಬೆದರಿಕೆ ಎದುರಿಸುತ್ತಿರುವ ದಂಪತಿಗೆ ರಾಜ್ಯ ಸರಕಾರ ರಕ್ಷಣೆ ನೀಡಬೇಕು ಹಾಗೂ ಅಂತಹ ದಂಪತಿ ಜೀವ ಬೆದರಿಕೆ ಇರುವ ಬಗ್ಗೆ ವಿವಾಹ ನೋಂದಣಾಧಿಕಾರಿಗೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News