ಮಧ್ಯಪ್ರದೇಶ ಪತ್ರಕರ್ತನ ಸಾವಿನ ಪ್ರಕರಣ: ಸಿಬಿಐ ತನಿಖೆಗೆ ಮುಖ್ಯಮಂತ್ರಿ ಶಿಫಾರಸು

Update: 2018-03-27 15:22 GMT
ಸಂದೀಪ್ ಶರ್ಮಾ

 ಭೋಪಾಲ,ಮಾ.27: ಸ್ಥಳೀಯ ಟಿವಿ ವಾಹಿನಿಯೊಂದರ ಸುದ್ದಿಗಾರ ಸಂದೀಪ್ ಶರ್ಮಾ ಅವರ ಸಾವಿನ ಕುರಿತು ಸಿಬಿಐ ತನಿಖೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ಶಿಫಾರಸು ಮಾಡಿದ್ದಾರೆ. ತನ್ನ ಸರಕಾರವು ಪತ್ರಕರ್ತರ ರಕ್ಷಣೆಗೆ ಬದ್ಧವಾಗಿದೆ ಎಂದು ಚೌಹಾಣ್ ಸೋಮವಾರ ಹೇಳಿದ್ದರು. ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸುವಂತೆ ಕಾಂಗ್ರೆಸ್ ನಾಯಕರಾದ ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಅಜಯ ಸಿಂಗ್ ಅವರು ಆಗ್ರಹಿಸಿದ್ದರು.

 ನ್ಯೂಸ್ ವರ್ಲ್ಡ್ ಟಿವಿ ಚಾನೆಲ್‌ನಲ್ಲಿ ಸ್ಟ್ರಿಂಜರ್ ಆಗಿದ್ದ ಶರ್ಮಾ ಸೋಮವಾರ ಬಿಂದ್‌ನಲ್ಲಿ ತನ್ನ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಕೋತ್ವಾಲಿ ಪೊಲೀಸ್ ಠಾಣೆಯ ಬಳಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮಮ ಸಾವನ್ನಪ್ಪಿದ್ದರು. ಲಾರಿ ಚಾಲಕ ರಣಬೀರ ಯಾದವ ಎಂಬಾತನನ್ನು ಅದೇ ದಿನ ಪೊಲೀಸರು ಬಂಧಿಸಿದ್ದರು.

ಶರ್ಮಾ ಅವರು ಉಪವಿಭಾಗ ಪೊಲೀಸ್ ಅಧಿಕಾರಿ ಇಂದ್ರವೀರ ಸಿಂಗ್ ಭದೋರಿಯಾ ವಿರುದ್ಧ ಕುಟುಕು ಕಾರ್ಯಾಚರಣೆ ನಡೆಸಿ, ಚಂಬಲ್ ನದಿಯಿಂದ ಅಕ್ರಮವಾಗಿ ತೆಗೆಯಲಾದ ಮರಳನ್ನು ಯಾವುದೇ ತಪಾಸಣೆಯಿಲ್ಲದೆ ಸಾಗಾಟಕ್ಕೆ ಅವಕಾಶ ನೀಡಲು ಸಿಂಗ್ ಲಂಚ ಕೇಳಿದ್ದನ್ನು ಬಹಿರಂಗಗೊಳಿಸಿದ್ದರು.

ಭದೋರಿಯಾ ತನ್ನನ್ನು ಯಾವುದಾದರೂ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಬಹುದು ಅಥವಾ ರಸ್ತೆ ಅಪಘಾತದಲ್ಲಿ ತನ್ನನ್ನು ಮುಗಿಸಬಹುದು ಎಂಬ ಭೀತಿಯನ್ನು ವ್ಯಕ್ತಪಡಿಸಿದ್ದ ಶರ್ಮಾ ತನಗೆ ಪೊಲೀಸ್ ರಕ್ಷಣೆಯನ್ನು ಕೋರಿಪತ್ರವನ್ನು ಬರೆದಿದ್ದರು.ಭದೋರಿಯಾರನ್ನು ತಕ್ಷಣವೇ ಚಂಬಲ್ ವಿಭಾಗದ ಹೊರಗೆ ವರ್ಗಾಯಿಸಬೇಕು ಮತ್ತು ಅವರ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಬೇಕು ಎಂದೂ ಅವರು ಪತ್ರದಲ್ಲಿ ಆಗ್ರಹಿಸಿದ್ದರು.

ಕೊಲೆಯಲ್ಲದ ಮಾನವಹತ್ಯೆ ಪ್ರಕರಣವನ್ನು ದಾಖಲಿಸಿ ಕೊಂಡಿರುವ ಪೊಲೀಸರು, ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News