ರಾಷ್ಟ್ರಪತಿ ಭವನದಲ್ಲಿ ತಿಂಡಿಗಳಿಗೆ ಕಡಿವಾಣ ಹಾಕಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

Update: 2018-03-28 13:12 GMT

ಹೊಸದಿಲ್ಲಿ, ಮಾ.28: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೇಶದ ಅತ್ಯುನ್ನತ ಹುದ್ದೆಯಲ್ಲಿ ಎಂಟು ತಿಂಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಈ ಅವಧಿಯಲ್ಲಿ ರಾಷ್ಟ್ರಪತಿ ಭವನದಲ್ಲಿಯ ವ್ಯರ್ಥ ವೆಚ್ಚಗಳಿಗೆ ಕಡಿವಾಣ ಹಾಕಲು ಹೆಚ್ಚಿನ ಆದ್ಯತೆಯನ್ನು ಅವರು ನೀಡಿರುವಂತಿದೆ.

ಸಂವಿಧಾನದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಓರ್ವ ವ್ಯಕ್ತಿಗೆ 350 ಕೋಣೆಗಳ ಅರಮನೆ, ಸಾವಿರಾರು ಸಿಬ್ಬಂದಿಗಳು, ನಿರ್ವಹಣೆಗಾಗಿ ವಾರ್ಷಿಕ ನೂರಾರು ಕೋಟಿ ರೂ.ಗಳ ವೆಚ್ಚ ಇತ್ಯಾದಿಗಳ ಬಗ್ಗೆ ಆಗಿಂದಾಗ್ಗೆ ಟೀಕೆಗಳು ಕೇಳಿಬರುತ್ತಲೇ ಇವೆ.

 ಕೋವಿಂದ್ ಅವರು ತನ್ನ ನಿವಾಸದಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು, ಇವುಗಳ ಪೈಕಿ ವ್ಯರ್ಥ ವೆಚ್ಚಗಳಿಗೆ ಕಡಿವಾಣ ಹಾಕುವ ನಿರ್ಧಾರ ಪ್ರಮುಖವಾಗಿದೆ.

ಕಳೆದ ವರ್ಷದ ಜುಲೈ,25ರಂದು ರಾಷ್ಟ್ರಪತಿ ಭವನದಲ್ಲಿ ತನ್ನ ವಾಸವನ್ನು ಆರಂಭಿಸಿದ ಕೋವಿಂದ್‌ಅವರು ಮಿತವ್ಯಯದ ಮೊದಲ ಕ್ರಮವಾಗಿ ಈ ಅರಮನೆ ಸದೃಶ ನಿವಾಸದಲ್ಲಿ ಸಿದ್ಧಗೊಳ್ಳುವ ತಿಂಡಿಗಳು ಮತ್ತು ಖಾದ್ಯಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಆದೇಶಿಸಿದ್ದಾರೆ.

ಈ ಮೊದಲು ರಾಷ್ಟ್ರಪತಿ ಭವನದ ಪಾಕಶಾಲೆಯಲ್ಲಿ ಅತಿಥಿಗಳು ಮತ್ತು ಅಧಿಕಾರಿಗಳಿಗಾಗಿ ಕನಿಷ್ಠ ಐದು ಬಗೆಯ ತಿಂಡಿಗಳು ಮತ್ತು ಹಲವಾರು ಖಾದ್ಯಗಳನ್ನು ತಯಾರಿಸಲಾಗುತ್ತಿತ್ತು. ಈ ಪೈಕಿ ಹೆಚ್ಚಿನವು ದಿನವೂ ವ್ಯರ್ಥವಾಗುತ್ತಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋವಿಂದ್ ಅವರ ಆದೇಶದ ಮೇರೆಗೆ ತಿಂಡಿಗಳು ಮತ್ತು ಖಾದ್ಯಗಳ ಸಂಖ್ಯೆಯನ್ನು ಈಗ ಕೇವಲ ಎರಡಕ್ಕೆ ಸೀಮಿತಗೊಳಿಸಲಾಗಿದೆ.

ಹೂವುಗಳು ಮತ್ತು ಬಾಂಕ್ವೆಟ್ ಪಾರ್ಟಿಗಳು

 ಇದೇ ರೀತಿ ರಾಷ್ಟ್ರಪತಿ ಭವನದಲ್ಲಿಯ ಕೋಣೆಗಳು ಮತ್ತು ಹಾಲ್‌ಗಳ ಅಲಂಕಾರಕ್ಕಾಗಿ ಇಡಲಾಗುತ್ತಿದ್ದ ಹೂವುಗಳ ಸಂಖ್ಯೆಯನ್ನೂ ಗಣನೀಯವಾಗಿ ಕಡಿತಗೊಳಿಸಲಾಗಿದೆ. ಈಗ ಅಲಂಕಾರಕ್ಕಾಗಿ ಕನಿಷ್ಠ ಸಂಖ್ಯೆಯ ಹೂವುಗಳನ್ನು ಬಳಸಲಾಗುತ್ತಿದೆ.

ಅಲ್ಲದೆ ರಾಷ್ಟ್ರಪತಿ ಭವನದಲ್ಲಿ ಆಗಾಗ್ಗೆ ವೆಭವೋಪೇತ ಪಾರ್ಟಿಗಳು ನಡೆಯುತ್ತಿದ್ದ ದಿನಗಳೂ ಈಗ ಹಳೆಯದಾಗಿವೆ. ಈ ಹಿಂದೆ ಪದೇ ಪದೇ ಅವೇ ವ್ಯಕ್ತಿಗಳಿಗಾಗಿ ಹಲವಾರು ಪಾರ್ಟಿಗಳನ್ನು ಆಯೋಜಿಸ ಲಾಗುತ್ತಿತ್ತು. ಇದರಿಂದ ಯಾವುದೇ ಉದ್ದೇಶ ಸಾಧನೆಯಾಗುತ್ತಿರಲಿಲ್ಲ. ಈಗ ಇಂತಹ ಪಾರ್ಟಿಗಳನ್ನು ಉತ್ತೇಜಿಸಲಾಗುತ್ತಿಲ್ಲ.

ಧಾರ್ಮಿಕ ಉತ್ಸವಗಳಿಗೂ ಕತ್ತರಿ

ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದಾಗಿನಿಂದ ರಾಷ್ಟ್ರಪತಿ ಭವನದಲ್ಲಿ ಧಾರ್ಮಿಕ ಉತ್ಸವಗಳ ಆಯೋಜನೆ ನಿಂತುಹೋಗಿದೆ. ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ರಾಷ್ಟ್ರಪತಿ ಭವನದ ಕಟ್ಟಡವನ್ನು ಬಣ್ಣಬಣ್ಣಗಳ ಎಲ್‌ಇಡಿ ದೀಪಗಳಿಂದ ಅಲಂಕರಿಸಲಾಗಿತ್ತಾದರೂ ಹಬ್ಬವನ್ನು ಆಚರಿಸಲಾಗಿರಲಿಲ್ಲ. ಕ್ರಿಸ್ಮಸ್ ವೇಳೆ ಕ್ಯಾರೊಲ್‌ಗಳ ಹಾಡುವಿಕೆಗೆ ಅವಕಾಶವಿರಲಿಲ್ಲ. ಇಫ್ತಾರ್ ಕೂಟಗಳೂ ನಡೆಯದಿರುವ ಹೆಚ್ಚಿನ ಸಾಧ್ಯತೆಗಳಿವೆ.

ಅತಿಥಿಗಳ ಪಟ್ಟಿಯೂ ಮೊಟಕು

 ಇನ್ನೊಂದು ಪ್ರಮುಖ ಬೆಳವಣಿಗೆಯಲ್ಲಿ ರಾಷ್ಟ್ರಪತಿ ಭವನದ ಅತಿಥಿಗಳ ಪಟ್ಟಿಗೂ ತೀವ್ರ ಕತ್ತರಿ ಹಾಕಲಾಗಿದೆ. 2,000ಕ್ಕೂ ಅಧಿಕ ಅತಿಥಿಗಳಿದ್ದ ಈ ಪಟ್ಟಿ ಈಗ ಕೇವಲ 700 ಚಿಲ್ಲರೆಗೆ ಮೊಟಕುಗೊಂಡಿದೆ. ಈ ವರ್ಷದ ಗಣರಾಜ್ಯೋತ್ಸವದಂದು ‘ಅಟ್ ಹೋಮ್’ ಕಾರ್ಯಕ್ರಮದ ಅತಿಥಿಗಳ ಪಟ್ಟಿಯಲ್ಲಿ ರಾಷ್ಟ್ರಪತಿಗಳ ಕುಟುಂಬ ಸದಸ್ಯರೂ ಇರಲಿಲ್ಲ. ಸಂಸದರು, ಉನ್ನತ ಸಾಂವಿಧಾನಿಕ ಹುದ್ದೆಗಳಲ್ಲಿರುವವರು, ಸಶಸ್ತ್ರ ಪಡೆಗಳ ಮುಖ್ಯಸ್ಥರು, ರಾಯಭಾರಿಗಳು ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿಗಳಂತಹ ಗಣ್ಯರ ಹೆಸರುಗಳು ಮಾತ್ರ ಕಡ್ಡಾಯ ಪಟ್ಟಿಯಲ್ಲಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News