ಚುನಾವಣಾ ದಿನಾಂಕ ಸೋರಿಕೆ: ಕಾಂಗ್ರೆಸ್‌ನ ಶ್ರೀವತ್ಸರ ವಿಚಾರಣೆ ನಡೆಸಲಿರುವ ಚು. ಆಯೋಗ

Update: 2018-03-28 15:15 GMT
ಅಮಿತ್ ಮಾಲವಿಯ

ಹೊಸದಿಲ್ಲಿ, ಮಾ.28: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕದ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಕಾಂಗ್ರೆಸ್ ಕಾರ್ಯಕರ್ತ ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಶ್ರೀವತ್ಸರನ್ನು ಪ್ರಶ್ನಿಸಲಿದೆ. ಇದೇ ವೇಳೆ, ಬಿಜೆಪಿ ಈಗಾಗಲೇ ಈ ಕುರಿತು ವಿವರಣೆ ನೀಡಿರುವ ಕಾರಣ ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಮಿತ್ ಮಾಲವಿಯರ ತನಿಖೆಯಾಗಲಿ, ವಿಚಾರಣೆಯಾಗಲಿ ನಡೆಸಲಾಗುವುದಿಲ್ಲ ಎಂದು ಮಾಧ್ಯಮ ವರದಿ ತಿಳಿಸಿದೆ.

ಬಿಜೆಪಿಯ ಅಮಿತ್ ಮಾಲವಿಯ ಮತ್ತು ಕಾಂಗ್ರೆಸ್‌ನ ಶ್ರೀವತ್ಸ, ಚುನಾವಣಾ ಆಯೋಗವು ಕರ್ನಾಟಕ ರಾಜ್ಯ ಚುನಾವಣೆಯ ದಿನಾಂಕವನ್ನು ಪ್ರಕಟಿಸುವುದಕ್ಕೂ ಮೊದಲೇ ಟ್ವೀಟ್ ಮಾಡಿದ್ದರು. ಪ್ರಕರಣದ ತನಿಖೆ ನಡೆಸಲು ಆರು ಸದಸ್ಯರ ಸಮಿತಿಯನ್ನು ರಚಿಸಿರುವ ಆಯೋಗವು ಈ ಕುರಿತು ಶ್ರೀವತ್ಸರನ್ನು ವಿಚಾರಣೆ ನಡೆಸುವಂತೆ ಸೂಚಿಸಿದೆ. ಆದರೆ ಮಾಲವಿಯ ಅವರನ್ನು ವಿಚಾರಣೆಯಿಂದ ಮುಕ್ತಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಸಂಚಾಲಕಿ ಪ್ರಿಯಾಂಕ ಚತುರ್ವೇದಿ, ಚು.ಆಯೋಗದ ವಿಶ್ವಾಸಾರ್ಹತೆಯನ್ನು ದೃಢಪಡಿಸಲು ತೆಗೆದುಕೊಳ್ಳುವ ಯಾವ ನಿರ್ಧಾರವನ್ನೂ ಪಕ್ಷ ಸ್ವಾಗತಿಸುತ್ತದೆ. ಆದರೆ ಈ ತನಿಖೆಯಲ್ಲಿ ಬಿಜೆಪಿ ಮಾಲವಿಯರ ಹೆಸರನ್ನು ಸೇರಿಸದಿರುವುದು ಆಯೋಗದ ಘನತೆಯನ್ನು ಮತ್ತಷ್ಟು ಕುಸಿಯುವಂತೆ ಮಾಡಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಚು.ಆಯೋಗ, ಬಿಜೆಪಿಯ ಪ್ರತಿನಿಧಿಗಳ ಬಳಗ ಮಾಲವಿಯ ಬರೆದ ಸ್ಪಷ್ಟೀಕರಣ ಪತ್ರದೊಂದಿಗೆ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿತ್ತು. ಈ ಪತ್ರದಲ್ಲಿ ಮಾಲವಿಯ ಚುನಾವಣೆಯ ದಿನಾಂಕ ಪಡೆದ ಮೂಲದ ಬಗ್ಗೆ ವಿವರಣೆ ನೀಡಿದ್ದಾರೆ. ಬಿಜೆಪಿಯ ಐಟಿ ಸೆಲ್ ಈ ಟ್ವೀಟನ್ನು ಕ್ಷಣಮಾತ್ರದಲ್ಲಿ ಅಳಿಸಿಹಾಕಿತ್ತು ಎಂದು ತಿಳಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯು ಮೇ 12ರಂದು ನಡೆಯಲಿದ್ದು ಮೇ 15ಕ್ಕೆ ಫಲಿತಾಂಶ ಹೊರಬೀಳಲಿದೆ. ಸ್ಥಳೀಯ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಯ ಆಧಾರದಲ್ಲಿ ತಾವು ಚುನಾವಣಾ ದಿನಾಂಕ ಟ್ವೀಟ್ ಮಾಡಿರುವುದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಸ್ಪಷ್ಟನೆ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News