ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಘಟನೆಯಲ್ಲಿ ಗಾಯಗೊಂಡಿದ್ದ ಪೈಲಟ್ ಆಸ್ಪತ್ರೆಯಲ್ಲಿ ಮೃತ್ಯು

Update: 2018-03-28 15:55 GMT

ಮುಂಬೈ, ಮಾ.28: ಮಾರ್ಚ್ 10ರಂದು ಕರಾವಳಿ ತಟರಕ್ಷಣಾ ಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ನಡೆಸಿದ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ಸಹಪೈಲಟ್, 17 ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

 ರಾಯ್‌ಗಡದ ಮುರುದ್ ಎಂಬಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದಾಗ ಸಹಪೈಲಟ್ ಕ್ಯಾ. ಪೆನಿ ಚೌಧರಿ ಎಂಬವರಿಗೆ ತಲೆಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಯಲ್ಲಿ ತಲೆಗೆ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಅವರನ್ನು ಜೀವರಕ್ಷಕ ವ್ಯವಸ್ಥೆಯಲ್ಲಿ ಇಡಲಾಗಿತ್ತು. ಪೆನಿ ಚೌಧರಿ ಅಪಘಾತಗೊಂಡಿದ್ದ ಹೆಲಿಕಾಪ್ಟರ್‌ನಿಂದ ಮೊದಲು ಹೊರಬಂದಿದ್ದರು. ಆದರೆ ಆ ವೇಳೆ ತಿರುಗುತ್ತಿದ್ದ ಹೆಲಿಕಾಪ್ಟರ್‌ನ ರೆಕ್ಕೆ ಹೆಲ್ಮೆಟ್‌ಗೆ ಬಡಿದು ತೀವ್ರ ಗಾಯಗೊಂಡಿದ್ದರು.

ಆಕಾಶದಲ್ಲಿ ಹೆಲಿಕಾಪ್ಟರ್‌ನ ಇಂಜಿನ್ ಸ್ಥಗಿತಗೊಂಡಾಗ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಹಾಗೂ ಸಹ ಪೈಲಟ್ ಹೆಲಿಕಾಪ್ಟರ್‌ನ ತಿರುಗುವ ರೆಕ್ಕೆಯನ್ನು ನಿಯಂತ್ರಿಸುವ ಮೂಲಕ ಅದನ್ನು ಸಮುದ್ರಕ್ಕೆ ಪತನವಾಗದಂತೆ ತಡೆದು ಸಮುದ್ರತೀರದತ್ತ ತಿರುಗಿಸಲು ಯಶಸ್ವಿಯಾಗಿದ್ದರು. ಆದರೆ ಸಮುದ್ರತೀರದ ಮರಳಿನ ಭಾಗದಲ್ಲಿ ಹೆಲಿಕಾಪ್ಟರ್ ಇಳಿಸುವ ಅವರ ಪ್ರಯತ್ನ ಕೈಗೂಡದೆ, ಬಂಡೆಗಲ್ಲು ಇದ್ದ ಭಾಗದಲ್ಲಿ ಭೂಸ್ಪರ್ಶ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News