ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ಬೆಂಬಲಿಗರ ಅಭಿಪ್ರಾಯ ಆಲಿಸಿದ ಬಿಎಸ್‍ವೈ ಪುತ್ರ ವಿಜಯೇಂದ್ರ
ಶಿವಮೊಗ್ಗ, ಮಾ. 28: ಬಿಜೆಪಿ ಪಕ್ಷದ ಸಿಎಂ ಅಭ್ಯರ್ಥಿ ಎಂದೇ ಘೋಷಿತವಾಗಿರುವ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರದಿಂದ ಕಣಕ್ಕಿಳಿಯುವುದು ಖಚಿತವಾಗಿದೆ. ಇನ್ನೊಂದೆಡೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದ ಹಾಲಿ ಶಾಸಕ ಬಿ.ವೈ.ರಾಘವೇಂದ್ರಗೆ, ತಂದೆಯಿಂದ ಹಸಿರು ನಿಶಾನೆ ಸಿಗದ ಕಾರಣದಿಂದ ಚುನಾವಣಾ ಅಖಾಡದಿಂದ ದೂರ ಉಳಿಯುವುದು ಬಹುತೇಕ ಖಚಿತವಾಗಿದೆ.
ಮತ್ತೊಂದೆಡೆ ಬಿ.ಎಸ್.ವೈ.ರವರ ಕೊನೆಯ ಪುತ್ರ ವಿಜಯೇಂದ್ರ, ವಿಧಾನಸಭಾ ಚುನಾವಣಾ ಕಣಕ್ಕೆ ಧುಮುಕಲಿದ್ದಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಇದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ರಾಜಕೀಯ ಕ್ಷೇತ್ರ ಪ್ರವೇಶಿಸಲು ಮೊದಲು ತೀವ್ರ ನಿರಾಸಕ್ತಿ ವ್ಯಕ್ತಪಡಿಸಿದ್ದ ವಿಜಯೇಂದ್ರ, ಇತ್ತೀಚೆಗೆ ಚುನಾವಣಾ ಕಣಕ್ಕಿಳಿಯುವ ಕುರಿತಂತೆ ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಶಿವಮೊಗ್ಗ ನಗರಕ್ಕೆ ಭೇಟಿಯಿತ್ತ ಸಂದರ್ಭದಲ್ಲಿ ಅವರು, ಆಪ್ತರು ಹಾಗೂ ಹಿತೈಷಿಗಳ ಜೊತೆ ಈ ಕುರಿತಂತೆ ಸಮಾಲೋಚನೆ ಕೂಡ ನಡೆಸಿ ಅಭಿಪ್ರಾಯ ಆಲಿಸಿದ್ದಾರೆ ಎಂದು ತಿಳಿದುಬಂದಿದೆ.
'ಕಳೆದ ಕೆಲ ದಿನಗಳ ಹಿಂದೆ ವಿಜಯೇಂದ್ರ ಶಿವಮೊಗ್ಗಕ್ಕೆ ಭೇಟಿಯಿತ್ತ ವೇಳೆ ರಾಜಕೀಯ ಪ್ರವೇಶದ ಕುರಿತಂತೆ ಅವರ ಜೊತೆ ಚರ್ಚೆ ನಡೆಸಿದ್ದೇವೆ. ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ನಾವೇ ಒತ್ತಡ ಹಾಕಿದ್ದೇವೆ. ಈ ಬಗ್ಗೆ ವಿಜಯೇಂದ್ರರವರು ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಲಿಲ್ಲವಾದರೂ, ತಂದೆ (ಬಿ.ಎಸ್.ವೈ) ಹಾಗೂ ಪಕ್ಷದ ಪ್ರಮುಖರ ನಿರ್ಧಾರದಂತೆ ಮುನ್ನಡೆಯುವುದಾಗಿ ತಿಳಿಸಿದ್ದಾರೆ' ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಶಿವಮೊಗ್ಗ ನಗರದ ವಿಜಯೇಂದ್ರ ಆಪ್ತರೊಬ್ಬರು ತಿಳಿಸುತ್ತಾರೆ.
ನಿಲುವು ನಿಗೂಢ: ತಮ್ಮ ಕೊನೆಯ ಪುತ್ರ ವಿಜಯೇಂದ್ರ ರಾಜಕೀಯ ಪ್ರವೇಶದ ಕುರಿತಂತೆ, ಬಿ.ಎಸ್.ವೈ ಇಲ್ಲಿಯವರೆಗೂ ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಅವರ ನಿಲುವು ಏನೆಂಬುವುದು ನಿಗೂಢವಾಗಿದ್ದು, ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
'ವರುಣಾ ಕ್ಷೇತ್ರದಿಂದ ವಿಜಯೇಂದ್ರರನ್ನು ಕಣಕ್ಕಿಳಿಸುವುದು, ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟದ್ದು. ಹಾಗೆಯೇ ರಾಜಕೀಯ ಪ್ರವೇಶದ ಬಗ್ಗೆ ವಿಜಯೇಂದ್ರ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಈ ವಿಷಯದಲ್ಲಿ ತಾನು ಮಧ್ಯಪ್ರವೇಶ ಮಾಡುವುದಿಲ್ಲ. ಪುತ್ರನ ಪರವಾಗಿ ಯಾವುದೇ ಲಾಬಿಯೂ ನಡೆಸುವುದಿಲ್ಲ. ಆತನನ್ನು ರಾಜಕೀಯಕ್ಕೆ ಬಾ ಎಂದು ಆಹ್ವಾನಿಸುವುದೂ ಇಲ್ಲ' ಎಂದು ಬಿ.ಎಸ್.ವೈ. ತಮ್ಮ ಆಪ್ತರ ಬಳಿ ಹೇಳಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಸಾಧ್ಯತೆ ಏನು?: ರಾಣೆಬೆನ್ನೂರು ಅಥವಾ ಹಿರೇಕೇರೂರು ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲು ಬಿ.ವೈ.ರಾಘವೇಂದ್ರ ಸಿದ್ದತೆ ನಡೆಸುತ್ತಿದ್ದರು. ಆದರೆ ಪುತ್ರನ ನಿರ್ಧಾರಕ್ಕೆ ಯಡಿಯೂರಪ್ಪ ಸಮ್ಮತಿ ವ್ಯಕ್ತಪಡಿಸಿರಲಿಲ್ಲ. ಚುನಾವಣಾ ಕಣಕ್ಕಿಳಿಯದೆ, ಶಿಕಾರಿಪುರ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಚುನಾವಣಾ ಸಿದ್ದತೆ ನಡೆಸುವಂತೆ ಪುತ್ರನಿಗೆ ಸೂಚನೆ ನೀಡಿದ್ದರು. ಮುಂದಿನ ದಿನಗಳಲ್ಲಿ ವಿಧಾನಸಭೆಗೆ ಆಯ್ಕೆಯಾದರೆ ತಮ್ಮ ರಾಜೀನಾಮೆಯಿಂದ ತೆರವಾಗಲಿರುವ ಶಿವಮೊಗ್ಗ ಲೋಕಸಭಾ ಸದಸ್ಯತ್ವಕ್ಕೆ ನಡೆಯಲಿರುವ ಉಪ ಚುನಾವಣೆ ಹಾಗೂ 2019 ರ ಚುನಾವಣೆಗೆ ಬಿ.ವೈ.ರಾಘವೇಂದ್ರರನ್ನು ಕಣಕ್ಕಿಳಿಸುವ ಚಿಂತನೆ ಬಿ.ಎಸ್.ವೈ.ರವರದ್ದಾಗಿದೆ ಎಂದು ಹೇಳಲಾಗುತ್ತಿದೆ.
ಬಿ.ವೈ.ರಾಘವೇಂದ್ರ ವಿಧಾನಸಭಾ ಚುನಾವಣಾ ಕಣದಿಂದ ದೂರ ಉಳಿಯುತ್ತಿರುವುದರಿಂದ ವಿಜಯೇಂದ್ರರನ್ನು ವಿಧಾನಸಭಾ ಅಖಾಡಕ್ಕಿಳಿಸಬೇಕೆಂಬ ಆಗ್ರಹ ಅವರ ಬೆಂಬಲಿಗರದ್ದಾಗಿದೆ. ರಾಜಕೀಯ ಪ್ರವೇಶಕ್ಕೆ ಮೊದಮೊದಲು ಒಲವು ವ್ಯಕ್ತಪಡಿಸದ ವಿಜಯೇಂದ್ರ ಇದೀಗ ರಾಜಕೀಯ ಎಂಟ್ರಿಗೆ ಓಕೆ ಎಂದಿರುವ ಮಾತುಗಳು ಕೇಳಿಬರುತ್ತಿವೆ.
ಮುಖಾಮುಖಿ: ಬಿ.ಎಸ್.ವೈ. ಆಪ್ತ ಸಿದ್ದಲಿಂಗ ಸ್ವಾಮಿ ಸೇರಿದಂತೆ ಹಲವರು ವರುಣಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ವಿಜಯೇಂದ್ರ ಕಣಕ್ಕಿಳಿಯುವುದು ಖಚಿತವಾದರೆ ಅವರಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಸ್ಪರ್ಧಾಕಾಂಕ್ಷಿಗಳು ಸ್ಪಷ್ಟಪಡಿಸಿದ್ದಾರೆನ್ನಲಾಗಿದೆ. ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ. ವಿಜಯೇಂದ್ರ ಕಣಕ್ಕಿಳಿದರೆ ತಂದೆಯ ಪ್ರಭಾವ ಮತ್ತೀತರ ಕಾರಣಗಳಿಂದ ಸಾಕಷ್ಟು ಅನುಕೂಲವಾಗಲಿದೆ. ಮತ್ತೊಂದೆಡೆ ಈ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನು ಕಣಕ್ಕಿಳಿಸಲು ಚಿಂತನೆ ನಡೆಸುತ್ತಿರುವ ಮಾತುಗಳಿವೆ.
ಒಂದು ವೇಳೆ ವಿಜಯೇಂದ್ರ - ಯತೀಂದ್ರ ಕಣಕ್ಕಿಳಿಯುವುದು ಖಚಿತವಾದರೆ, ವರುಣಾ ಕ್ಷೇತ್ರವು ಹಾಲಿ - ಮಾಜಿ ಸಿಎಂ ಮಕ್ಕಳ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ. ಒಟ್ಟಾರೆ ಬಿ.ಎಸ್.ವೈ.ರವರ ಕೊನೆಯ ಪುತ್ರ ವಿಜಯೇಂದ್ರ ರಾಜಕೀಯ ಪ್ರವೇಶ ಪಡೆಯುತ್ತಾರಾ? ಇಲ್ಲವಾ? ಎಂಬುವುದು ಅವರ ತವರೂರು ಶಿವಮೊಗ್ಗ ಜಿಲ್ಲಾ ರಾಜಕೀಯ ವಲಯದಲ್ಲಿ ಕುತೂಹಲ ಕೆರಳುವಂತೆ ಮಾಡಿದೆ. ಹಲವು ರೀತಿಯ ಚರ್ಚೆಗಳಿಗೂ ಆಸ್ಪದವಾಗುವಂತೆ ಮಾಡಿದೆ.
'ರಾಜಕಾರಣದಿಂದ ಬಹುದೂರ...'
'ವಿಜಯೇಂದ್ರರವರು ಎಲ್‍ಎಲ್‍ಬಿ ಪದವೀಧರರಾಗಿದ್ದಾರೆ. ಹೊರಗಡೆ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ತಂದೆ ಹಾಗೂ ಸಹೋದರ ರಾಜಕಾರಣದಲ್ಲಿದ್ದರೂ, ಅವರು ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕುಟುಂಬ ಒಡೆತನದ ಶಿಕ್ಷಣ ಸಂಸ್ಥೆ, ಇತರೆ ವ್ಯವಹಾರಗಳನ್ನು ಗಮನಿಸುತ್ತಾರೆ. ಶಿವಮೊಗ್ಗ ಹಾಗೂ ಬೆಂಗಳೂರು ಎರಡೂ ಕಡೆ ಓಡಾಡಿಕೊಂಡಿದ್ದಾರೆ. ಅವರ ರಾಜಕೀಯ ಕ್ಷೇತ್ರ ಪ್ರವೇಶಿಸಬೇಕು ಎಂಬುವುದು ನಮ್ಮೆಲ್ಲರ ಆಗ್ರಹವಾಗಿದೆ. ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ' ಎಂದು ಶಿವಮೊಗ್ಗದ ಅವರ ಆಪ್ತರೋರ್ವರು ತಿಳಿಸುತ್ತಾರೆ.